’ನಮ್ಮೂರಿನ ಬಯಲು ನಾಟಕಗಳ ಸುಂದರ ಪರಂಪರೆ’ !

ಬಯಲು ನಾಟಕ :


ಟೂರಿಂಗ್ ಟಾಕೀಸ್ ಸಿನಿಮಾ ಯಾವಾಗಲೋ ಬರ್ತಿತ್ತು. ಆದರೆ ನಮಗೆ ನಿಜವಾಗಿ ಮನರಂಜನೆ ಒದಗಿಸುತ್ತಿದ್ದ ಸಾಧನವೆಂದರೆ ಬಯಲುನಾಟಕವೇ !

ನಮ್ಮಊರಿನಲ್ಲಿ ಮೊದಲಿನಿಂದಲೂ ಪ್ರಸಿದ್ಧಿ. ನಮ್ಮ ಹಳ್ಳಿಯವರ ಭಾಷೆಯಲ್ಲಿ ಅದನ್ನು ಆಟ’ವೆಂದುಕರೆಯುತ್ತಿದ್ದರು. ಬಬೃವಾಹನನ ಕಾಳಗ, ನಳಚರಿತ್ರೆ, ಹರಿಶ್ಚಂದ್ರ ಪುರಾಣ, ರಾಮಾಯಣ, ಮಹಾಭಾರತ, ಗಿರಿಜಾಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕ, ಇತ್ಯಾದಿಗಳನ್ನು ಬಹಳ ಸುಂದರವಾಗಿಯೂ, ಮನೋಜ್ಞವಾಗಿಯೂ ಅಭಿನಯಿಸುತ್ತಿದ್ದರು.  ನಾವು ರಾತ್ರಿಯೆಲ್ಲಾ ರಸ್ತೆಯಲ್ಲಿ ಜಮಖಾನ ಹಾಕಿ ಕುಳಿತು, ನಾಟಕ ನೋಡಿ ನಲಿಯುತ್ತಿದ್ದೆವು. ನಾಲ್ಕು ಬಂಡಿಯ ಚಕ್ರಗಳನ್ನು ಮಣ್ಣಿನಲ್ಲಿ ಆಳವಾಗಿ ಹೂಣುತೆಗೆದು ಹೂತಿರುತ್ತಾರೆ. ಅದರಮೇಲೆ ಮರದ ತೊಲೆಗಳನ್ನು ಅಡಿಕೆಮರದ ಸೀಳಿದ ದಿಮ್ಮಿಗಳನ್ನು ಅದರಮೇಲೆ ಹಲಿಗೆಗಳು ಭದ್ರವಾಗಿ  ಸೇರಿಸಿ ಕಟ್ಟುತ್ತಾರೆ. ದಪ್ಪದಾದ ಜಮಖಾನವನ್ನು ಗುಡಾರವನ್ನು ಅದರಮೇಲೆ ಹರಡಿ ಕೊನೆಯನ್ನು ಚೆನ್ನಾಗಿ ಮಡಿಸಿ ಕಟ್ಟುತ್ತಾರೆ.  ಸಾಮಾಜಿಕ ನಾಟಕಗಳನ್ನು ಯಾರೂ ಎಲ್ಲೂ ಆಡುವುದಿಲ್ಲ. ಎಲ್ಲಾ ಪೌರಾಣಿಕ ನಾಟಾಕಗಳು. ರಾಮ, ಕೃಷ್ಣ, ಭೀಮ ಅರ್ಜುನ, ಅಶ್ವತ್ಥಾಮ, ರಾವಣ, ಸೀತೆ, ರುಕ್ಮಿಣಿ, ದ್ರೌಪದಿ, ಹೆಣ್ಣು ಪಾತ್ರಗಳನ್ನು ಗಂಡಸರೇ ಮಾಡುತ್ತಿದ್ದರು. ಬೆಳಗಿನ ಚುಮು-ಚುಮು ಹೊತ್ತಿಗೆ ಮಂಗಳ ಹಾಡಿ ಆಟ ಮುಗಿಸುತ್ತಿದ್ದರು.

ನಮ್ಮಣ್ಣ ರಾಮಕೃಷ್ಣ, ಅವನ ನ್ಯಾಷನಲ್ ಕಾಲೇಜ್  ಗೆಳೆಯ ತಮ್ಮಯ್ಯನೆಂಬ ಹುಡುಗನನ್ನು ಬೆಂಗಳೂರಿನಿಂದ  ಕರೆತಂದಿದ್ದ. ಬೈಲು-ನಾಟಕ ತೋರಿಸಲು. ತಮ್ಮಯ್ಯನಿಗೆ ಅಲ್ಲಿನ ಹಳ್ಳಿ ಜನರ ಮಧ್ಯೆ ನೆಲದಮೇಲೆ  ಕೂತು ನಾಟಕ ನೋಡಲು  ಸಾಧ್ಯವಾಗದೆ, ನಮ್ಮ ಮನೆಯ ಹೊರಗಡೆಯ ಜಗುಲಿಕಟ್ಟೆಯಮೇಲೆ ಕುಳಿತು, ಅಥವಾ ಮಲಗಿ ಅದರ ಆನಂದವನ್ನು ಆಸ್ವಾದಿಸಿದನೆಂದು ಬೆಳಿಗ್ಯೆ ತಿಳಿಯಿತು. ಎಷ್ಟೇ ಆಗಲಿ, ಬೆಂಗಳೂರಿನ ಚಾಮರಾಜಪೇಟೆಯಲ್ಲಿದ್ದವನು. ನವನಾಗರೀಕತೆಯ ಲೇಪ ಅವನನ್ನು ಆವರಿಸಿತ್ತು. ತಂದೆ ಒಳ್ಳೆಯ ನೌಕರಿಯಲ್ಲಿದ್ದರು. ವಾಸಕ್ಕೆ ದೊಡ್ಡಮನೆ. ನಮ್ಮ ನಾಟಕದ ಪಾತ್ರಗಳನ್ನು ನಾವು ಊಹಿಸಬಹುದು. ಸ್ವಲ್ಪ ಊಹಾಶಕ್ತಿಯಿದ್ದರೆ ಇನ್ನೂ ಹೆಚ್ಚು ಆನಂದವನ್ನು ಅನುಭವಿಸಬಹುದೆಂದು ನನಗನ್ನಿಸಿತ್ತು.   ರಾಮ ಬಂದರೆ, ೫ ನಿಮಿಷವಾದರೂ ರಂಗದಮೇಲೆ ಥಕಥಕ, ಕುಣಿದು ಏದುಸಿರಿನಿಂದ ಸುಧಾರಿಸಿಕೊಳ್ಳುತ್ತಾ  ನಿಲ್ಲುತ್ತಾನೆ. ಅಲ್ಲೊಬ್ಬ ಸಾರಥಿಯೆಂಬ ಪಾತ್ರಹೇಳಿಮಾಡಿಸಿದಂತೆ ಇರುತ್ತದೆ. ಸಾರಥಿ, ಹೊಸದಾಗಿ ರಂಗಪ್ರವೇಶಮಾಡಿದ ಪ್ರತಿ ಪಾತ್ರವನ್ನೂ ತನ್ನ ಲೋಕಾರೀಢಿಯ ಪ್ರಶ್ನೆಯನ್ನು ಕೇಳುವ ಮೂಲಕ ಜನರಿಗೆ ಪರಿಚಯಮಾಡಿಸುತ್ತಾನೆ. 'ಈ ಸ್ಥಾನಕ್ಕೆ ಬರುವ ಕಾರಣವಾದರೂ ಏನು ಮಹಾಪ್ರಭೋ ? ಎಂದಾಗ, ಪಾತ್ರಧಾರಿಯು ಒಮ್ಮೆ ಛಂಗನೆ ಹಾರಿ, ಎಲೆಲವೋ ಸಾರಥಿ ಕೇಳುವಂತಹವನಾಗು, ಈ ಮಾತುಗಳನ್ನಾಡುತ್ತಿರುವ ಭೂಪನು ಯಾರೆಂದು ತಿಳಿದೆಯಾ, ನಿನಗೆ ಊಹಿಸಲೂ ಸಾಧ್ಯವಿಲ್ಲ. 'ಅತಳ, ಸುತಳ,  ಪಾತಾಳ, ತಳಾತಳಗಳಲ್ಲಿ ಹೆಸರುಪಡೆದು ರಾಕ್ಷಸರನ್ನೂ ಸದೆಬಡಿದು ಮಂಡಲದಲ್ಲೆಲ್ಲ ಹೆಸರುಮಾಡಿದ ಮಾವೀರ ಯಾರೆಂದು ಮತ್ತೊಮ್ಮೆ ಕೇಳು' ? 'ಯಾರು ಮಹಾಪ್ರಭು' ?

ನನ್ನಹೆಸರು, ಅರ್ಜುನ ಪಾಂಡವರಲ್ಲಿ ೩ ನೆಯವನು ನಾನು. 'ತಿಳಿಯಿತೇನೊ' ಎಂದಾಗ ಸ್ವಾಮಿ ಎಂದು ಪಕ್ಕದ ಕುರ್ಚಿಯನ್ನು ತೋರಿಸಿದಾಗ, 'ಆಸನವನ್ನು ಗ್ರಹಣಮಾಡುವಂತಹರಾಗಿ ಮಹಾಪ್ರಭೊ' ಹೀಗೆ ಎಲ್ಲ ಪಾತ್ರಗಳ ಪರಿಚಯವೂ ಆಗುತ್ತದೆ. 

ಆದ್ದರಿಂದ ಅದನ್ನು ಮತ್ತೆ ಮತ್ತೆ ನೋಡುವ ಅಗತ್ಯವಿಲ್ಲ. ಮತ್ತೊಂದು ಪಾತ್ರಬರಲು ಸ್ವಲ್ಪಸಮಯವಂತೂ ಬೇಕು; ನಿದ್ರೆ ತೆಗೆಯುತ್ತಿದ್ದರು. ಜೋರಾಗಿ ಮಾತಾಡುತ್ತಿದ್ದದ್ದರಿಂದ ಮಾತು ಕತೆಗಳು ನಮ್ಮ ಮನೆಯ ವರೆಗೆ, ಸ್ಪಸ್ಟವಾಗಿಯೂ  ಚೆನ್ನಾಗಿಯೂ ಕೇಳಿಸುತ್ತಿತ್ತು. 


ನಮಗೆಲ್ಲಾ ಪ್ರಿಯವಾದ ಪಾತ್ರವೆಂದರೆ ಸಾರಥಿಯ ಪಾತ್ರ :


ಸ್ವಲ್ಪ ತಮಾಷೆಯನ್ನು ತಂದು ರಸಿಕರನ್ನು ನಗಿಸುವ ಕಲೆಯಲ್ಲಿ ಸುಪ್ರಸಿದ್ಧರೆಂದರೆ, ’ಸಾರಥಿಯ ಪಾತ್ರ’ನಿರ್ವಾಹಕರು. ಅವರದು ವಿಶೇಷವಾಗಿ ರೂಪಿಸಿದ ಪಾತ್ರ. ಅದು ಪೌರಾಣಿಕ ಕಥೆಯಲ್ಲೆಲ್ಲೂ ಬರುವುದಿಲ್ಲ. ವಿಚಿತ್ರವಾದ ವೇಷಭೂಷಣ, ರಾಗವಾದ ಮಾತು, ನಡೆಯುವಾಗ ಕುಂಟುವು, ಇಲ್ಲವೇ ವಕ್ರವಾಗಿ  ನಗುವುದು, ಮುಖಮಾಡುವುದು, ಇತ್ಯಾದಿ. ಜನಗಳು ತುಟಿಪಿಟಕ್ಕೆನ್ನದೆ, ಆನಂದದಿಂದ ಕಳ್ಳೆಕಾಯಿತಿನ್ನುತ್ತಲೋ ಅಥವಾ ಬೀಡಿಸೇದುತ್ತಲೋ ನೋಡಿ ಆನಂದಿಸುತ್ತ ಕೇಕೆಹಾಗಿ ನಗುತ್ತಿದ್ದರು. 

ಅವರಿಗೆ ಗೊತ್ತಿರುವ ಪರಮ-ಸ್ನೇಹಿತ ಸ್ಟೇಜಿನಮೇಲೆ ಬಂದನೆಂದರೆ, "ಏ ಸಿದ್ದಣ್ಣ, ಏನ್ ಉಸ್ರೆ ಇಲ್ದಂಗ್ ಮಾಡ್ತಿಯಲ್ಲೋ, ಇನ್ನೂಜೋರಾಗ್ ಒದ್ರೋ ಮಾರಾಯ"  ಅನ್ನುತ್ತಿದ್ದರು. "ಸಾಕ್ ನಡಿ ನಿನ್ ಕೆಲ್ಸ ಆತು." "ಇಬ್ಬರ್ಗೂ ಬೆಂಕಿಇಟ್ಟು ಓಗೊದೆ ಅಲ್ವ ನಿನ್ಕೆಲ್ಸ", "ಒಳ್ಳೆ ಮನ್ಸಕಣ್ಲಾ,  ಓಗೋಗು ಕಂಡಿದಾರೆ" ಅನ್ನೊರು. ಇನ್ನೂ ಕುಣ್ಯಲೆ, ನೋಟಿನ್ ಸರ ಬ್ಯಾಡೇನ್ ನಿಂಗೆ ಅನ್ನೊರು. ನಾಟಕದ ಪಾತ್ರಗಳಲ್ಲಿ ಅವರು ತಲ್ಲೀನರಾಗುತ್ತಿದ್ದದ್ದನ್ನು ನಾವು ಕಾಣಬಹುದು. ವರ್ಷಕ್ಕೊಮ್ಮೆ ನಡೆಯುವ ಈ ಆಟವನ್ನು ಅವರು ತಪ್ಪಿಸಿಕೊಳ್ಳುತ್ತಿರಲಿಲ್ಲ. ಅಕ್ಕ ಪಕ್ಕದ ಗ್ರಾಮಗಳಿಂದ ಗಾಡಿಗಳನ್ನು ಕಟ್ಟಿಸಿಕೊಂಡು ಬಂದು ನೋಡಿ ಸಂತೋಷಪಡುತ್ತಿದ್ದರು. ಊರಿನ ಅಮಲ್ದಾರ್ರು,  ಪಂಚಾಯತಿ ಛೇರ್ಮನ್, ಶ್ಯಾನುಭೋಗರು ಮುಂತಾದ ಗಣ್ಯವ್ಯಕ್ತಿಗಳು ಅಲ್ಲೆ ಕುಳಿತು ನೋಡುವುದು ಅವರ ಘನತೆಗೆ ಕಡಿಮೆಯಲ್ಲವೇ ! ಮುಂತಾದವರು ಬಂದು ಸ್ವಲ್ಪಸಮಯದನಂತರ ಹೆಣ್ಣುಪಾತ್ರಮಾಡಿದ ಯಾರಿಗಾದರೂ ೧೦ ರೂ.ಗಳ ನೋಟುಗಳನ್ನು ನಿವಾಳಿಸಿ ಅವರಕೈನಲ್ಲಿಡುತ್ತಿದ್ದರು. ಇಲ್ಲವೇ ಕೆಲವರ ಹೆಸರನ್ನು ಹೇಳಿ ಕೊನೆಯಲ್ಲಿ ಅವರಿಗೆ 'ನನ್ನ ಈ ಬಳುವಳಿ ಕೊಡ್ರಪ್ಪ' ಅಂತ ಹೇಳಿ ಮನೆಗೆಹೋಗುತ್ತಿದ್ದರು.

ರಾಮಕೃಷ್ಣನ ಬೆಂಗಳೂರಿನ ಗೆಳೆಯ ತಮ್ಮಣ್ಣ, ಮಾರನೆಯ ದಿನ ಬೆಳಿಗ್ಯೆ ಎದ್ದಿದ್ದು ೧೨ ಗಂಟೆಗೇ. ರಾಮಕೃಷ್ಣ, ತಮ್ಮಯ್ಯ ಅದೇನು ನಿದ್ದೆ ಮಾಡಿದ್ರಪ್ಪ.  ಆಮೇಲೆ ಎದ್ದು, ಊಟಮಾಡಿ ಅಮ್ಮನ ಕೈಯಿನ ಆಡಿಗೆಯನ್ನು ಧಾರಾಳವಾಗಿ ಹೊಗಳಿ, ಮತ್ತೊಮ್ಮೆ ಬಿಡುವುಮಾಡಿಕೊಂಡು ಬರುವುದಾಗಿ ಆಶ್ವಾಸನೆ ಇತ್ತು, ತಮ್ಮಯ್ಯ, ಬೆಂಗಳೂರಿಗೆ ಹೊರಟರು. ಆಮೇಲೆ ತಮ್ಮಯ್ಯನ ಮಾತೇ ಇಲ್ಲ. ಅದ್ಯಾಕೊ ರಾಮಕೃಷ್ಣನಿಗೂ ನೆನೆಪು ಬರಲಿಲ್ಲವೇನೊ. ಅವನಿಗೆ ಎಲ್ಲಿ ಹೋದರೂ ಗೆಳೆಯರು ಇದ್ದೇ ಇರೊರು. ಮಾತಿನ ಮಲ್ಲ. ಮೋಡಿ ಹಾಕಿ ಎಲ್ಲರನ್ನೂ ಸೆಳೆದಿದ್ದ. ಅವನ ಕಾವ್ಯನಾಮ, 'ಕರಿಯಯ್ಯನೊರ್ ಮರಿಮಗ' ಅಂತ. ನ್ಯಾಶನಲ್ ಕಾಲೇಜ್ ಮ್ಯಾಗಜೈನ್ ನಲ್ಲಿ”ಬಡಾಯಿ ಬೋರ ’ ಅನ್ನೊ ಲೇಖನ ಬರೆದಿದ್ದ. ಚೆನ್ನಾಗಿತ್ತು. ಅದೆಲ್ ಹೋಯ್ತೊ ದೇವರಿಗೇ ಗೊತ್ತು.  ಅವನು ಬರೆದ ಕಥೆ ಕವನಗಳ ಸವಿನೆನಪು ಈಗ ನಮಗೆ ಬುದ್ಧಿಬಂದಮೇಲೆ ಸೊಗಸಾಗಿ ಕಾಣುತ್ತದೆ. ಆಗ ಅದರ ಬಗ್ಗೆ ನಮಗೆ ಜ್ಞಾನ ವಿರಲಿಲ್ಲ ! ಅಮ್ಮ ಮಾತ್ರ ಅವನು ಬರೆದ ಕಥೆಗಳಲ್ಲಿ ಬರುವ ಪ್ರತಿ ವಾಕ್ಯಗಳನ್ನೂ ತಪ್ಪದೆ ಹೇಳುತ್ತಿದ್ದಳು. ಪಾಪ, ಅವಳಿಗಾಗಲಿ, ನಮಗಾಗಲಿ, ಮನರಂಜನೆಗೆ ಬೇರೆ ಯಾವ ಸಾಧನಗಳೂ ಇರಲಿಲ್ಲ. ನಾವಂತೂ ಅಮ್ಮ ನಮಗೆ ಮಲಗುವಾಗ ಹೇಳಿದ ರಾಜಕುಮಾರಿ-ರಾಜಕುಮಾರರ  ಕಥೆಗಳು ಕರ್ಣ, ದುರ್ಯೋಧನ, ಕೃಷ್ಣಸುಧಾಮರ ಕತೆಗಳನ್ನು ಕೇಳುತ್ತಲೇ ಬೆಳೆದೆವು !

’ನಮ್ಮೂರಿನ ಕೆರೆ, ಅಥವಾ ತ್ವಾಟದ ಭಾವಿಯಲ್ಲಿ  ಬಟ್ಟೆ-ಒಗೆದ ಸವಿ  ನೆನಪುಗಳು" 

ಇದು ನನ್ನ ೧೬  ವರ್ಷಗಳ ಹೊಳಲ್ಕೆರೆ ಜೀವನದಲ್ಲಿ ನಿಧಾನವಾಗಿ ಬದಲಾಗುತ್ತಾ ಬಂದಿತ್ತು. ನಮ್ಮನವರು ಹೇಳುತ್ತಿದ್ದ ನವನಾಗರೀಕತೆ ಬಂದಂತೆಲ್ಲಾ ನಮ್ಮಊರಿನಜನರೂ ಒಂದು ಸಮಯದಲ್ಲಿ ಹೊಸ ಸನ್ನಿವೇಶಗಳಿಗೆ ಕಣ್ಣು ತೆರೆದಿದ್ದಾರೆ ಎನ್ನುವುದಕ್ಕೆ ಇದು ಒಂದು ಸಾಕ್ಷಿ. ವಿಶ್ವವೆಲ್ಲಾ ನಾಗಾಲೋಟ, ಅಥವ ಪಿ. ಸಿ. ಯ "ಒಂದು ಕ್ಲಿಕ್" ನೊಂದಿಗೆ ಭರದಿಂದ ಸಾಗಿದರೆ, ನಮ್ಮ ಊರಿನ ಜನ, ಅದನ್ನು ಕೇಳಿ ಆನಂದಿಸುತ್ತಾರೆ. ಪತ್ರಿಕೆಯಲ್ಲಿ ಓದುತ್ತಾರೆ ಅವನ್ನು ಕಾರ್ಯಗತ ಮಾಡಲು ಅವರದೇ ಆದ ಅನೇಕ ಉಪದ್ರವಗಳಿವೆ.

ನಾವು ಚಿಕ್ಕವರಾಗಿದ್ದಾಗ, ಅಂದರೆ ೨-೩ ವರ್ಷದವರಾಗಿದ್ದಾಗ. ಬಟ್ಟೆ ಒಗೆಯಲು ಸಾಬೂನು ಮತ್ತು ಡಿಟರ್ಜೆಂಟ್ ಇರಲಿಲ್ಲ. ಅಂದರೆ ಅದು ಸುಮಾರು ೧೯೪೬-೪೭ ರ ಸಮಯ. ಆಗ ಎಲ್ಲವೂ ವಿದೇಶಿಯೆ. ನಾವು ಕಾಪಿಬರೆಯಲು "ಆರ್ನಾಲ್ಡ್ ಕಾಪಿಬುಕ್" ಬಳಸುತ್ತಿದ್ದೆವು. ಮಕ್ಕಳಿಗೆ ತಾಯಂದಿರು, ವುಡ್ಬರ್ಡ್ಸ್ ಗ್ರೈಪ್ ವಾಟರ್ ಕೊಡುತ್ತಿದ್ದರು. ಪೆನ್ಸಿಲ್ ಪೆನ್ನಿನ ನಿಬ್, ಶಾಹಿ, ಬರೆಯುವ ಕಾಗದ, "ಬಿನ್ನಿ ಮಿಲ್ ಡ್ರೆಸ್ ಬಟ್ಟೆ,"  "ಫಿನ್ಲೆ ಮಿಲ್ಸ್ ಪಂಚೆ",  ಇತ್ಯಾದಿಗಳು. "ಬ್ರುಕ್ ಬಾಂಡ್ ಟಿ,"  ಸಾಬುನ್, ಆ ಹೊತ್ತಿಗಾಗಲೇ "ಟಾಟ ಕಂಪೆನಿ" ಯವರುತಯಾರಿಸಲು ಆರಂಭಿಸಿದ್ದರು. ನಾವು ತರುತ್ತಿದ್ದದ್ದು, "೫೦೭ ಬ್ರಾಂಡ್ ಬಾರ್ ಸಾಬೂನು."  ಅಮ್ಮ ಕೆರೆಗೆ ಹೋಗಿ ಬಟ್ಟೆ ಕಸಗಿಕೊಂಡು ಬರುತ್ತಿದ್ದರು. ಅಲ್ಲಿ ಕೆಳಗೆ ಕಾಣಿಸುವ ಮರಳನ್ನೇ ಬಟ್ಟೆಗೆ ಉಜ್ಜಿ ಕೊಳೆ ತೆಗೆಯುವ ಏರ್ಪಾಡಿತ್ತು. ಅದಕ್ಕೆ "ಚೌಳು ಮಣ್ಣು"  ಎನ್ನುತ್ತಿದ್ದರು. ಅದನ್ನು ತಲೆಯಮೇಲಿಟ್ಟುಕೊಂಡು ಮಾರಲು ಬರುತ್ತಿದ್ದರು. ಅದು ಬಣ್ಣವಿಲ್ಲದ ಬಿಳಿಯ ಮರಳು. ಸ್ವಲ್ಪ ನೊರೆಬರುತ್ತಿತ್ತು. ಆಮೇಲೆ ಸೋಪ್ ಬಂದಾಗ ಜನರೆಲ್ಲಾ ಅತಿ ಎಚ್ಚರಿಕೆಯಿಂದ ಅವನ್ನು ಬಳಸುತ್ತಿದ್ದರು. ಅದರ ಕ್ರಯ ಹೆಚ್ಚಲ್ಲವೆ. ಕೆರೆಯಲ್ಲಿ ನೀರಿದ್ದಾಗ ನಮಗೂ ಬಟ್ಟೆ ಒಗೆಯಲು ಹೇಳಿಕೊಟ್ಟರು.

ನೀರು ತೀರ ಕಡಿಮೆಯಾಗಿ ಮೂಲೆಯಲ್ಲಿ ಹೋದಾಗ ನಮ್ಮಣ್ಣನ ಜೊತೆಗೆ ನಾವು " ತೆಮರೆಯವರ ತೋಟದ ಬಾವಿ" ಗೆ ಹೋಗುತ್ತಿದ್ದೆವು. ಕೆರೆಯ ಹಿಂದೆ, ಏರಿಯಿಂದ ಕೆಳಗಿಳಿದರೆ, ತೊಟ ಇದ್ದದ್ದರಿಂದ ಬಾಗಿಗೆ ಚೆನ್ನಾಗಿ "ಜಲ " ಬರುತ್ತಿತ್ತು.  ಹೆಚ್ಚು ಕಡೆಮೆ ಯಾವಾಗಲೂ ಅದರಲ್ಲಿ ನೀರಿರುತ್ತಿತ್ತು. ಈಜು ಬರುತ್ತಿರಲಿಲ್ಲ. ಹಾಗಾಗಿ ನಮಗೂ ಈಜು ಹೇಳಿಕೊಡುವವರ್ಯಾರೂ ಇರಲಿಲ್ಲ. ನಾನು ಯಾರನ್ನೊ ಸಂಪರ್ಕಿಸಿ, ಹಾಲವಾಣದ ಕೊರಡನ್ನು ತಯಾರುಮಾಡಿಸಿಕೊಂಡುಅದನ್ನು ಸೊಂಟಕ್ಕೆ ಕಟ್ಟಿಕೊಂಡು  ಭಾವಿಯಲ್ಲಿ ಇಳಿದು ಸ್ವಲ್ಪದೂರದ ವರೆಗೂ ಈಜಲು ಪ್ರಯತ್ನಿಸಿದ್ದೆ. ಆದರೆ ಅಮ್ಮನಿಗೆ ತಿಳಿದಾಗ ಅವಳು ಆ ಪ್ರಯೋಗಕ್ಕೆ ತನ್ನ ವಿರೋಧವನ್ನು ವ್ಯಕ್ತಪಡಿಸಿದ್ದಲ್ಲದೆ, ಅವಳನ್ನು ಕೇಳದೆ ಅಂಥ ಸಾಹಸಕ್ಕೆ ಕೈಹಾಕದಂತೆ "ಭಾಷೆ "ಪಡೆದಳು. ಸೈಕಲ್ ಹೊಡೆಯಲು ಅನುಮತಿ ದೊರೆಯಿತು.

ನಾವು, ನಮ್ಮಬಟ್ಟೆಗಳನ್ನು ಇಸ್ತ್ರಿಮಾಡಿಕೊಳ್ಳಲು ಆರಂಭಿಸಿದೆವು. ಅದಾಗಿದ್ದು ನಮ್ಮ ರಾಮಕೃಷ್ಣ ಯಾವಾಗಲಾದರು ದುರ್ಗದಿಂದಲೋ ದಾವಣಗೆರೆಯಿಂದಲೋ ಬಂದಾಗ ಅವನ ಶರಾಯಿ, ಶರ್ಟ್ಗ್ ಗಳನ್ನು ನಾವು ಚೆನ್ನಾಗಿ ಒಗೆದು, ಇಸ್ತ್ರಿ ಮಾಡಿ ಇಟ್ಟಿರುತ್ತಿದ್ದೆವು. ಹಾಗೆಯೇ ನಮ್ಮ ಬಟ್ಟೆಗಳೂ ಇಸ್ತ್ರಿಕಾಣಲು ತೊಡಗಿದವು. ಮೊದಲು ನಾನು ನನ್ನ ತಮ್ಮ, ನಮ್ಮ ಶರ್ಟ್ ಮತ್ತು ಪೈಜಾಮಗಳನ್ನುಚೆನ್ನಾಗಿ ಮಡಿಸಿ, ನೀವಿ, ತೀಡಿ, ಅವನ್ನು ನಮ್ಮ ತಲೆದಿಂಬಿನಡಿಯಲ್ಲಿ ಇಟ್ಟುಕೊಂಡು ಮಲಗುತ್ತಿದ್ದೆವು.

ಆದಿನಗಳಲ್ಲಿ ಬಟ್ಟೆಗಳನ್ನು ಒಗೆದು ಹಿಂಡಿ, ಒಂದು ಟವಲ್ ನಲ್ಲಿ ಜೋಡಿಸಿ, ಉಂಡೆಯಾಗಿ ಸುತ್ತಿಕೊಂಡು ಭುಜದಮೇಲೆ ಹೊತ್ತು ತರುವ ದೃಷ್ಯ ಸರ್ವೇ ಸಾಮಾನ್ಯವಾಗಿತ್ತು.  ರಸ್ತೆಯಲ್ಲಿ ಕಣ್ಣುಹಾಯಿಸಿದರೆ, ಕೆಲವರು, ಹೀಗೆ ಬಟ್ಟೆ ಆದರೆ, ಮತ್ತೆ ಕೆಲವರು, ಚಂಬು ಹಿಡಿದು ಹೊಗುವವರು, ಎತ್ತುಗಳನ್ನು ನೇಗಿಲಿಗೆ ಕಟ್ಟಿ ಓಡಿಸಿಕೊಂಡು ಹೋಗುವ ಯುವಕರು, ಎಮ್ಮೆ ಹೊಡೆದುಕೊಂಡು ಹೋಗುತ್ತಿದ್ದ ಪುಟ್ಟ ಹುಡುಗರು, ಎಮ್ಮೆಯ ತೋಕೆಗೆ ಸಗಣಿಯ ತಟ್ಟಿಹಿಡಿದು ಅದನ್ನು ಸಂಗ್ರಹಿಸುವ ವಸಂತ, ಮತ್ತಿತರು. ಜೋರಾಗಿ ಬಂಡಿ ಹೊಡೆದುಕೊಂಡು ಹೋಗುವ ಗ್ರಾಮದ ಯುವಕರು, ನಿಧಾನವಾಗಿ ಕೊಲುಹಿಡಿದು ಕಂಬಳಿಹೊದ್ದು ಕೆಮ್ಮುತ್ತಾ ಬರುವ ಅಥವಾ ಹೋಗುವ ವೃದ್ಧರು.  "ಕ್ಷೇತ್ರಪಾಲಯ್ಯನವರ ಭಾವಿ" ಯಿಂದ ನೀರು ಸೇದಿ, ಕಂಕಳಲ್ಲಿ ಒಂದು ಕೊಡ,  ತಲೆಯ ಮೇಲೆ ಸಿಂಬೆಯನ್ನು ಹಾಕಿಕೊಂಡು  ಮತ್ತೊಂದು ಕೊಡ, ಅದರ ಮೇಲೊಂದು ಚೊಂಬನ್ನು ಇಟ್ಟುಕೊಂಡು, ನಾಚುತ್ತ, ಹೆಜ್ಜೆಹಾಕುತ್ತಾ  ಬರುವ ಹರೆಯದ ನೀರೆಯರು, ಅವರ ದಣಿದ ಮುಖದ ಅಕ್ಕಪಕ್ಕಗಳಲ್ಲಿ, ದಟ್ಟವಾದ ತಲೆ ಕೂದಲುಗಳು ಗಾಳಿಗೆ ಹಾರಾಡುವ ಪರಿ, ಮತ್ತು ಹಣೆಯಮೇಲೆ ಘನೀಭವಿಸಿದ  ಬೆವರಿನ ಹನಿಗಳ ಹರಳುಗಳು, ಅಡ್ಡೆಯಲ್ಲಿ ಭರಸದಿಂದ ನೀರುತರುವ ಎಳೆಯರು, ಇವರನ್ನು ನೋಡಬಹುದಾಗಿತ್ತು. ಇವೆಲ್ಲಾ ಅತಿ ಗಮನವಿಟ್ಟು ನಿಗವಹಿಸಿ, ಅಣಿಮಾಡಿದ ಹಾಲಿವುಡ್ ಚಲನಚಿತ್ರದ ಸೆಟ್ ಇರಬಹುದೇ,  ಅಂತ ನನಗೆ ಈಗ ಅನ್ನಿಸುತ್ತಿದೆ. "ಆಲಿವರ್" ಚಿತ್ರನೋಡಿದಾಗ ನಮ್ಮ ಊರಿನ ನೆನಪಾಯಿತು !

ಎಲ್ಲರೂ ತಮ್ಮ ಯಾವುದಾದರೊಂದು ಕೆಲಸದಲ್ಲಿ ಮಗ್ನರಾಗಿರುತ್ತಿದ್ದರು. ಯಾರಿಗೂ ಬಿಡುವಿಲ್ಲ. ಒಂದು ದಿನದ ಊಟವನ್ನು ಸಂಪಾದಿಸಲು ಅದೆಷ್ಟು ಕಷ್ಟಪಡಬೇಕಾಗುತ್ತದೆ ಎನ್ನುವುದನ್ನು ನಾವು ಅಲ್ಲಿನ ದೈನಂದಿನ ಜೀವನದಲ್ಲಿ ಕಂಡುಕೊಂಡಿದ್ದೆವು. "ಕಸ್ತೂರಿ ಸೋಪ್", ತಿಳಿ ನೀಲಿಬಣ್ಣದ್ದು. ಬಟ್ಟೆಗಳಿಗೆ ನೀಲಿ ಹಾಕುವುದನ್ನು ಎಲ್ಲರೂ ಇಷ್ಟಪಡುತ್ತಿದ್ದರು. ಕೊಳೆ ಕಾಣಿಸುತ್ತಿರಲಿಲ್ಲ ಅದಕ್ಕೆ. "ಡಿಟರ್ಜೆಂಟ್ ಗಳು" ಬಂದವು ನೀರು ಒಮ್ಮೆಲೇ ಮಾಯವಾಯಿತು. ಯಾವಭಾವಿಯಲ್ಲೂ ನಿರೆಇಲ್ಲ. ಕೆರೆ ಬತ್ತಿದೆ. ನಿಧಾನವಾಗಿ ಹೊಳಲ್ಕೆರೆಯ ಬುದ್ಧಿಜೀವಿಗಳು ಅಂದರೆ ಅಲ್ಪಸ್ವಲ್ಪ ಓದಿಕೊಂಡವರು, ಮತ್ತು ಹತ್ತಿರದ  ನಗರಗಳಲ್ಲಿ ನೆಲೆಯಿದ್ದವರು, ಊರನ್ನು ಬಿಡಲು ಪ್ರಾರಂಭಿಸಿದರು. ಬೇರೆಯವರು ತಮ್ಮ ದುರಾದೃಷ್ಟವನ್ನು ಪ್ರತಿದಿನವೂ ಮನಸ್ಸಿನಲ್ಲಿ  ನಿಂದಿಸುತ್ತಾ,  ಅಲ್ಲೇ ಹೇಗೋ ಕಾಲಹಾಕುತ್ತಿದ್ದರು.

* ವಸಂತ ಮತ್ತು ಅವನ ಅಣ್ಣ-ತಮ್ಮಂದಿರು ನಮ್ಮಪ್ಪನವರ ಸ್ನೇಹಿತರಾಗಿದ್ದ ಶ್ರೀ. ಶ್ರೀಪಾಲ ಶೆಟ್ಟರ ಮಕ್ಕಳು. ಅವರು ಹೊಳಲ್ಕೆರೆ ಬಿಟ್ಟು ಹಲವಾರು ವರ್ಷಗಳೆ ಸರಿದಿವೆ.  ಈಗ ಮನೆಯಿರುವುದು ಬೆಂಗಳೂರಿನ "ನೆಟ್ ಕಲ್ಲಪ್ಪಾ ಸರ್ಕಲ್" ನಲ್ಲಿ.  ಅವರೆಲ್ಲಾ ಮದುವೆಯಾಗಿದ್ದಾರೆ.  ಅವರ ಮಕ್ಕಳೆಲ್ಲಾ ಒಳ್ಳೆಯ ಶಾಲಾ-ಕಾಲೇಜ್ ಗಳಿಗೆ ಹೊಗುತ್ತಿದ್ದಾರೆ. . ಅವರು ಜೈನರು. ಹಿರಿಯಮಗ ಪಾರ್ಸಿ, (ಪಾರ್ಶ್ವನಾಧ)  ಮಾತ್ರ ಹೊಳಲ್ಕೆರೆಯಲ್ಲೇ ಇದ್ದರು. ಅಲ್ಲಿನ "ಬಸದಿ" ಗೆ ಅವರೇ ಅರ್ಚಕರು. ಬೇರೆ ಮಕ್ಕಳು, "ನೇಮಿ," (ನೇಮಿನಾಥಯ್ಯ)  ಬೆಂಗಳೂರಿನಲ್ಲಿ ತಮ್ಮ ವ್ಯಾಪಾರ ಉದ್ಯೋಗಗಳ ವಹಿವಾಟುಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ನಾವೆಲ್ಲಾ ಚಿಕ್ಕವರಾಗಿದ್ದಾಗಲಿಂದಲೂ "ಲಂಗೋಟಿ" ಯನ್ನು ಹಾಕಿಕೊಳ್ಳುತ್ತಿದ್ದೆವು. ನನಗೆ ಬೇರೆಯವರ ವಿಚಾರ ಗೊತ್ತಿಲ್ಲ. ನಾನು ಮಾತ್ರ ಸುಮಾರು ವರ್ಷ ಅಂದರೆ ನನ್ನ ಮದುವೆಯಾದಮೇಲೂ ಲಂಗೋಟಿಯನ್ನೇ ಬಳಸುತ್ತಿದ್ದೆ. ಅದು ನನಗೆ ಒಗ್ಗಿ ಹೋಗಿತ್ತು. ಆದರೆ ಎಲ್ಲ ಹೆಣ್ಣುಮಕ್ಕಳಂತೆ ನನ್ನ ಹೆಂಡತಿಗೆ ಆಧುನಿಕ ಉಡುಪನ್ನು ಬಳಸುವ ಇಚ್ಛೆ ಇರುವುದು ಸಹಜತಾನೇ ! ಅದು ಡಾನ್ ಮಿಲ್ಲಿನ ಕಾಚಾದಿಂದ ಶುರುವಾಯಿತು.  "ಬನಿನ್" ಉಪಯೋಗಿಸಿದ ನೆನಪಿಲ್ಲ.  "ಕಾಚಾ" ಉಪಯೋಗಿಸುವ ಪರಿಪಾಠ ನಾನು ಶುರುಮಾಡಿದ್ದು ಬೊಂಬಾಯಿಗೆ ಬಂದಮೇಲೆ, ಅದೂ ಮದುವೆಯಾಗಿದ್ದ ಸಮಯದಲ್ಲಿ. "ಡಾನ್ ಮಿಲ್ "ನ ಜಾಹಿರಾತನ್ನು ನೋಡಿದ ಮೇಲೆ ಈ ಕ್ರಮ ಕೈಗೊಂಡಾಯಿತು.

'ಟಿ ಶರ್ಟ್' ಹಾಕಿಕೊಳ್ಳುವುದನ್ನು ಅಭ್ಯಾಸಮಾಡಿಕೊಂಡಿದ್ದು, ನಾನು ನನ್ನ ಮಗ, ಪ್ರಕಾಶನ ಕ್ಯಾಲಿಫೋರ್ನಿಯದ ಮನೆಗೆ ಹೋದಮೇಲೆ. ಅಪ್ಪ ಬನ್ನಿ ಮಾಲ್ ಗೆ ಹೋಗೋಣ ಅಂದು ನಮ್ಮನ್ನು ೫ ಮೈಲಿ ದೂರದಲ್ಲಿದ್ದ ಕರೆದುಕೊಂಡು ಹೋಗಿ ಅಲ್ಲಿ ವಿವಿಧ ಪ್ರಕಾರದ ಟಿಶರ್ಟ್ ಮತ್ತು ಜೀನ್ ಪ್ಯಾಂಟ್ ನ್ನುಖರೀದಿಸಿದ. ಇನ್ನು ಮೇಲೆ ಅಲ್ಲಿರುವ ತನಕ ಇದೇ ಡ್ರೆಸ್ ನಿಮ್ಮದು ಅಂದಾಗ ಸರಿಯೆಂದು ತಲೆಯಲ್ಲಾಡಿಸಿದ್ದೆ. ಮೊದಲೇ ಗೊತ್ತಾಗಿದ್ದಿದ್ದರೆ, ಆಷ್ಟೊಂದು ಸಾಮಾನುಗಳನ್ನು ಊರಿನಿಂದ  ತರುವ ಗೋಜಿರಲಿಲ್ಲ. ಚಳಿಯಂತೂ ಇಲ್ಲವೇ ಇಲ್ಲ. ಭಾರತಕ್ಕಿಂತ ಉತ್ತಮವಾದ ಹವಾಗುಣ ಅಲ್ಲಿ ನಮಗೆ ಸಿಕ್ಕಿತು. ಒಂದು ದಿನವೂ ನಾವು ಸ್ವೆಟರ್ ಬಳಸಿದ ನೆನಪಿಲ್ಲ.

* ವಸಂತ, ಮತ್ತು ಅವನ ಅಣ್ಣ-ತಮ್ಮಂದಿರು,  ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರೆಲ್ಲಾ ಉತ್ತಮ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅನೇಕ ಕೌಶಲಗಳನ್ನು ಪಡೆದು, ಅವನ್ನು  ಬೆಳಸಿಕೊಳ್ಳುತ್ತಿದ್ದಾರೆ.

Comments

Popular posts from this blog

ತಾಯಿಯಂತೆ ಮಗಳು ನೂಲಿನಂತೆ ಸೀರೆ !

Shri. Chitradurga Mahadev Bhatt, Bombay's one of the Great Yoga teachers during 1950s to 1980s !

ಮಧುರ ಕ್ಷಣ- ಸರಸ್ವತಿ ಸಮ್ಮಾನ್, ಪದ್ಮ ಭೂಷಣ ಪ್ರಶಸ್ತಿ ವಿಜೇತ, ಡಾ. ಎಸ್ ಎಲ್. ಭೈರಪ್ಪನವರ ಜತೆ ಸಂದರ್ಶನ !