"ನಮ್ಮೂರಿನ ಕೆರೆಗಳು ತುಂಬ್ತಿದ್ದಿದ್ದು, ೧೨ ವರ್ಷಕ್ಕೊನ್ಸಲ " !

ಮಲೆನಾಡು ಅಂತಹೇಳುವ ಶಿವಮೊಗ್ಗ,  ಭದ್ರಾವತಿ ನಮ್ಮ ಊರಿಗೆ ಹೆಚ್ಚಿಗೆ ದೂರವೇನಿಲ್ಲ. ಕೇವಲ ೬೦-೭೦ ಮೈಲಿಗಳಿರಬಹುದುಷ್ಟೆ. ಆದರೆ ಯಾವಾಗಲೂ ಬರಗಾಲ ಸದೃಷವಾದ ನಮ್ಮೂರಿನ ನೀರಿನ ಬವಣೆಯನ್ನು ಹೇಳುವುದು ಒಂದು ಯಾವುದೋ ದುರಂತ ಕತೆಯನ್ನು ವರ್ಣಿಸಿದಂತೆ.

"ಹೊನ್ನೆಕೆರೆ," ಮರಳು ತುಂಬ್ಕೊಂಡಿರೋದು.  ಹೆಚ್ಚಾನು ಆಳವಿಲ್ಲದ. ಚಿಕ್ಕ ಕೆರೆ. "ಕೆಸರುಕಟ್ಟೆ," ಹೆಸ್ರೇ ಹೇಳೊ ಹಾಗೆ ಆಳವಿಲ್ಲ ಕೆಸರು ತುಂಬಿದ ಪುಟಾಣಿ ಕೆರೆ. ಏನಿದೄ "ಹಿರೆಕೆರೆ "ನೇ ಕೆರೆಂತ ಕರೆಸ್ಕೊಳ್ಳೋಕೆ ಲಾಯಕ್ಕಾಗಿದ್ದಿದ್ದು. ಅದಲ್ಲದೆ, ಇಲ್ಲಿ ಕೋಡಿಬಿದ್ದಾಗ ಹರಿದು ಹೋದ ನೀರು, ನೇರವಾಗಿ ಸೂಳೆಕೆರೆಗೆ ಹೋಗೊದಂತೆ. ಅದರ ಬಗ್ಗೆ ಆಗಲೂ ನಮಗೆ ಹೆಚ್ಚಿಗೆ ಗೊತ್ತಿರಲಿಲ್ಲ. ಈಗಂತ್ಲೂ ಊರೆ ಬಿಟ್ಟಾಯ್ತು. ಆದೄ ಆಸಕ್ತಿ ಕಡಿಮೆಯಾಗಿದೆ ಅಂತನ್ಸಲ್ಲ.

"ಹಿರೆಕೆರೆ ಏರಿ "ಮೇಲೇ ನಡ್ಕೊಂಡೋ ಬಂಡಿನಲ್ಲೊ, ಬಸ್ನಲ್ಲೋ  ಸುಮಾರು  ಒಂದೂವರೆ ಮೈಲಿ ಹೋದ್ರೆ, "ಚೀರ್ನ್ಹಳ್ಳಿ ಗೇಟ್," ಒಂದ್ ಮಸೀದಿ, ಬರತ್ತೆ. ಅಲ್ಲಿವರ್ಗೂ  ಇದೆ ಈ ಕೆರೆ. ಅರ್ಧಚಂದ್ರಾಕಾರವಾಗಿರುವ ಈ ಏರಿಕಟ್ಟೆನ ನಾವು ಒಂದು ಕಡೆಯಿಂದ ನೋಡಬಹುದು. ಸರಿಯಾಗಿ ಅರ್ಧಕೆರೆಯ ಏರಿಯಮೇಲೆ ನಡೆದರೆ, ನೀರ್ಗಂಟಿ ಕ್ಯಾಬಿನ್ ಇದೆ. ಇಲ್ಲೇ ಒಬ್ಬ ನೀರುಬಿಡುವ ಮನುಷ್ಯ ಕುಳಿತಿರೊನು. ನೀರಿನ ಮಟ್ಟ ಹೆಚ್ಚಿದ್ದನ್ನು ನೋಡ್ಕೊಂಡು ಅವನೇ ನಿರ್ಧರಿಸೊನು. ಹೆಚ್ಚ್ಗೆ ನೀರ್ನ ಹೊರಗೆ ಬಿಡೋ ವಿಚಾರ., ಏರಿಯ ಸ್ವಲ್ಪ ಬದಿಯಲ್ಲೇ ರಸ್ತೆ ಇರೊದು ಅದರ ಕೆಳಗೆ ನಮ್ಮೂರಿನ ಪ್ರಸಿದ್ಧ ತೋಟಗಳು "ತೆಂರೆ ಈಶ್ವರಪ್ಪನವರ ತೋಟ", "ನಾರಪ್ಪ", "ಭಂಗಿ ಮಹೇಶ್ವರಪ್ಪನವರ ತೋಟ" "ದೇವಪ್ಪನವರ ತೋಟ" ಇತ್ಯಾದಿ ಇವೆಲ್ಲ ಹೆಚ್ಚಾಗಿ ತೆಂಗಿನ ತೋಟಗಳು. ಸ್ವಲ್ಪ ಆಡಿಕೆ, ಮತ್ತು ಬಾಳೆಗಿಡಗಳೂ ಇರೋವು. ಪ್ರತಿತೋಟದಲ್ಲೂ  ಒಂದು ಬಾವಿ ಇದ್ದೇ ಇರೋದು.  ಕಪಿಲೆ ಹೊಡೆಯುವ ವ್ಯವಸ್ಥೆಗಾಗಿ  ಎತ್ತುಗಳು ಎತ್ತರಕ್ಕೆ ಮಾಡಿದ ಜಾಗದಿಂದ  ಮೇಲೆ ಹೋಗಿ ಕೆಳಗಡೆ ಬರಲು ಕವಲು ದಾರಿ ಇರ್ತಿತ್ತು.

ಏರೀಮೇಲೆ ಹೋಗೊ ಬಸ್ಸುಗಳು ದಾವಣಗೆರೆಗೆ,  ಹೋಗುತ್ತಿದ್ದವು. "ಕಾಳಘಟ್ಟ" ಕ್ಕೆ, "ಶ್ಯಾಗಲೆ  ಹಳ್ಳ" ಕ್ಕೆ, ಸಾಸಲಿಗೆ,  ಚಿಕ್ಕಜಾಜೂರಿಗೆ ಹೋಗಲು. ರಸ್ತೆಮಾತ್ರ ಅತಿ ಕಿಶ್ಕಿಂದದ್ದು. ಹೆಚ್ಚುಕಡಿಮೆಯಾದರೆ ಸುಮಾರು ೩೦ ಅಡಿ ಕೊರಕಲುಮಣ್ಣಿಗೆ ಹೋಗಿ ಬೀಳುವ ಸಂಭವವೇ ಹೆಚ್ಚಾಗಿತ್ತು. ತೋಟದ ಪಕ್ಕದಲ್ಲಿ ಕೆಲವು ಹೊಲಗಳಿದ್ದವು. ಅವು ಮೇನ್ ರಸ್ತೆಯ ಬದಿಯವರೆಗೂ ಇದ್ದು ದೊಡ್ಡಾ ಸೇತುವೆಯ ಎದುರಿಗೇ  ಅಲ್ಲೆ ಒಂದು "ತುರುಕರ ಸ್ಮಶಾನಭೂಮಿ " ಯೂ ಇತ್ತು. ಹೆಚ್ಚಾದ ಮಳೆನೀರಿನಿಂದ ಕೆರೆಕೋಡಿಬಿದ್ದು ಆ ಪ್ರದೇಶವೆಲ್ಲಾ ನೀರಿನಿಂದ ಆವೃತವಾಗಿರುತ್ತಿತ್ತು. ಗುಳುಗುಳು ಶಬ್ದ ಇರುತ್ತಿತ್ತು. ಅಲ್ಲೇ ಕೆಲವು ಹುಡುಗರು ಮೀನು ಹಿಡಿಯಲು ಗಾಳ ಹಿಡಿದುಕೊಂಡು ಕಾಯುತ್ತಾ ಕುಳಿತಿರುತ್ತಿದ್ದರು.

ಹೊಳಲ್ಕೆರೆ ರೈಲ್ವೆ ಸ್ಟೇಷನ್ ಕಡೆಯಿಂದ ಚಿತ್ರದುರ್ಗಕ್ಕೆ ಹೋಗು ಬಸ್ ಗಳು ಹೊಳಲ್ಕೆರೆಗೆ ಬರುತ್ತಿದ್ದವು ಆ ಸೇತುವೆಯಬಳಿ ಇಳಿದು ದಾವಣಗೆರೆ ಕಡೆ ಹೋಗುವ ಬಸ್ ಗೆ ಕಾಯುವ ನೋಟ. ಸೇತುವೆಯ ಮೇಲೆ ಸೈಕಲ್ ಹೊಡೆಯುತ್ತಾ ಬರುವ ಹೈಸ್ಕೂಲ್ ವಿದ್ಯಾರ್ಥಿ, ವಿದ್ಯಾರ್ತಿನಿಯರು. ಅವರ ನಗು, ತಮಾಷೆ, ಇತ್ಯಾದಿಗಳು. ಸ್ವಲ್ಪ ಊರಿನಕಡೆ ಮುಂದೆ ನಡೆದರೆ, ಬಸ್ ಏಜೆಂಟ್ ಮಾಲಿಕ,  ಶಿವರುದ್ರಪ್ಪನವರ ಮನೆ, ಡಾಕ್ಟರ್ ಶೆಂಕರಶೆಟ್ಟಿ, ಸೇತೂರಾಮಣ್ಣ, ಬಲಗಡೆ ಕೆನರಾ ಬ್ಯಾಂಕ್, ಮುಂದೆ ಫಾರೆಸ್ಟ್ ರೇಂಜರ ಆಫೀಸ್, ಮನೆ, ಎದುರಿಗೆ, ಮಿಡಲ್ ಸ್ಕೂಲ್ ಕಟ್ಟಡಗಳು ಇದ್ದವು. ಮೈದಾನದಲ್ಲಿ ಫುಟ್ಬಾಲ್  ಆಡುವ ಹುಡುಗರು. ಹೊಳಲ್ಕೆರೆ ಸರ್ಕಲ್, ಹೋಟೆಲ್, ತಾಲ್ಲೂಕ್ ಕಛೇರಿ, ಸೊಸೈಟಿ,  ಟೌನ್ ಹಾಲ್ ಕಟ್ಟಡ, ಪೋಸ್ಟ್ ಆಫೀಸ್ ಕಟ್ಟಡ ಇತ್ಯಾದಿಗಳು, ಕೊನೆಗೆ ಅಮಲ್ದಾರ್ ಮನೆ.

ತುಂಬಿದ ಕೆರೆಯ ನೀರು ಏರಿಯ ಎದುರಿಗೆ ಸುಮಾರು ಅರ್ಥಮೈಲಿ ಅಗಲದ ಛಾಯಪ್ಪನವರ ತೆಂಗಿನ ತೋಟದ ವರೆಗೆ ಹಬ್ಬಿತ್ತು. ಈಶ್ವರದೇವರ ಗುಡಿ, (ನಮ್ಮ ವಂಶದ ಪೂರ್ವಿಕರು ಕಟ್ಟಿಸಿದ ಭಾವಿ ಮತ್ತು ದೇವಸ್ಥಾನ)  ಈಚಲುಮರದ ಸಾಲು, ಕೆರೆ ಕೋಡಿಹರಿದಾಗ ಬರುವ ಕಾಲುವೆಗಳು, ದಾರಿಯಲ್ಲಿ  ಕಣಗಳು ಇತ್ಯಾದಿ ಇತ್ಯಾದಿ. ನಮ್ಮಪ್ಪ, ಮತ್ತು ನಮ್ಮತ್ತಿಗೆ, ನಾಗಮಣಿಯವರ ಮೃತ ದೇಹಗಳ  ಅಂತಿಮ ದಹನ-ಕಾರ್ಯಗಳನ್ನು ಇದೇ ಮೈದಾನದಲ್ಲಿ ಮಾಡಿದ್ದನ್ನು ಜನ ನಮಗೆ ಅಲ್ಲಿ ಬಂದಾಗ ತಿಳಿಯ ಹೀಳುತ್ತಿದ್ದರು.

"ಹೊನ್ನೆಕೆರೆ "ಕೋಡಿಬಿದ್ದಾಗ, ಹೆಚ್ಚಿನ ನೀರು," ಹೊಂಡ,"  ಮತ್ತು "ತಿಮ್ಮಪ್ಪನ ಭಾವಿ " ಗೆಬರೋದು ಪೇಟೆ ಭಾವಿಗಳೆಲ್ಲಾ ಅಗ ತುಂಬಿದ್ದು ಮೇಲಿನವರೆಗೂ ನೀರು ಬಂದ್ರೋದು. ಹೊಂಡ ಕೋಡಿಹರಿದಾಗ  ನೀರು ಇಳಿಜಾರಿನ ಕೊರಕಲಲ್ಲಿ ಹೊರಟು ಕೆರೆಯ ಕೆಳಗಡೆ ಇದ್ದ ತೆಂಗಿನ ತೋಟಗಳ ಮುಖಾಂತರ ದೂರಹರಿದು, ಗಣಪತಿ ದೇವರಗುಡಿಯ ಕಂದಕದ ಮುಖಾಂತರ ತಿಪ್ಪೆಗಳನ್ನು ಸುತ್ತುಹರಿದು, ಮುಂದೆ ಸಾಗಿ ಊರಿನಮುಂದಿನ "ಅಗಳತಿ"  ಹತ್ತಿರದ "ಆಂಜನೇಯನ ಗುಡಿ" ಯ ಬದಿಯಲ್ಲಿ ತಿರುಗಿ, ಮತ್ತೆ  ತಿಪ್ಪೆಗಳಮುಂಖಾಂತರ ಹರಿದು ಅಲ್ಲಿ ಆಳವಾಗಿದ್ದ ಹೊಂಡದಲ್ಲಿ ಜಮಾಯಿಸುತ್ತಿದ್ದವು. ಅಲ್ಲಿಗೆ ಹೊನ್ನೆಕೆರೆಯ ನೀರು ಮತ್ತೊಂದು ಕಾಲುವೆಯ ಮುಖಾಂತರ ಬಂದು ತಿಪ್ಪೆಗಳನ್ನು ಹಾಯ್ದು, "ಹೊಂಡ" ದಲ್ಲಿ ಐಕ್ಯವಾಗುತ್ತಿದ್ದವು. ಇಲ್ಲಿ ಹೆಚ್ಚಾದ ನೀರು ಪಕ್ಕದಲ್ಲೆ ಇದ್ದ ಹಿರೆಕೆರೆಯಿಂದ ಹೆಚ್ಚಾದ ಕೋಡಿಹರಿದ ನೀರಿನ ಜೊತೆ  ಸೇರಿ ಕೋಡಿಕಲ್ಲಿನಿಂದ ರಭಸದಿಂದ ಹಾರಿ ಹರಿದು ಸೇತುವೆಯ ಕೆಳಗಿನ ಭಾರಿ ಕಲ್ಲುಬಂಡೆಗಳ ಮಧ್ಯೆ, ನುಗ್ಗಿ ಸದ್ದುಮಾಡುತ್ತಾ ಹರಿದೋಡುವ ದೃಷ್ಯವನ್ನು ನಾವು ಸೇತುವೆಯಮೇಲಿನಿಂದ ಗಂಟೆಗಟ್ಟಲೆ ನಿಂತು ನೋಡುತ್ತಿದ್ದೆವು. 

ಈ ನೀರು ಹೋಗುವುದಾದರೂ ಎಲ್ಲಿಗೆ ಎಂದಾಗ ಅಲ್ಲಿನ ಹಿರಿಯರು, "ಇದೆಲ್ಲಾ ಸೀದ ಸೂಳೆಕೆರೆಗೆ ಓಗಿ ಮುಟ್ತೈತ್ರಿ" ಅನ್ನೊರು.  ಇಷ್ಟು ನೀರನ್ನು ನೋಡದೆ ನೀರಿಗಾಗಿ ಪರದಾಡಿದ ಜನಕ್ಕೆ ಹೊಸ ಉತ್ಸಾಹ, ಅದೇನೊ ಸಂಭ್ರಮ. ಕೆಂಪುಮಣ್ಣಿನ ಬಗ್ಗಡದ ನೀರು ಕುಡಿಯಲೂ ಯೋಗ್ಯವಲ್ಲದ್ದು. ಅದರಲ್ಲಿ ಬಟ್ಟೆ ಒಗೆದರೆ ಕೆಂಪುಬಣ್ಣಕ್ಕೆ ತಿರುಗುತ್ತಿದ್ದವು. ಸುಮಾರು ಸಾಯಂಕಾಲದ ಹೊತ್ತಿಗೆ ನೀರುತಿಳಿಯಾಗುತ್ತಿತ್ತು. ಈಜುವ ಹುಡುಗರ ಸಂಭ್ರಮ ಹೇಳತೀರದು. ಊರಮುಂದಿನ ತಿಪ್ಪೆಗಳೆಲ್ಲಾ ತುಂಬಿ ಕಾಣಿಸುತ್ತಿರಲಿಲ್ಲ. ಅಲ್ಲಿ ಆಗಾಗ ಕಾಗೆಗಳು ನೀರಿನ ಮಟ್ಟಕ್ಕಿಳಿದು ಕ್ರಿಮಿಕೀಟಗಳನ್ನು ತಿನ್ನಲು ಹವಣಿಸಿದಾಗ ಮಾತ್ರ ನಮಗೆ ತಿಳಿಯುವುದು ಬಹುಶಃ ತಿಪ್ಪೆಗಳಿರುವಜಾಗವಿವೆಂದು ! ಊರಿನ ಜನರಿಗೆ ಭಾವಿಯಲ್ಲಿ ಮೇಲೆ ನೀರುಬರುತ್ತಿದ್ದದ್ದರಿಂದ ಎಲ್ಲರ ಬಾಯಿನಲ್ಲೂ ಅದರದೇ ಮಾತು ಸಂಭ್ರಮ ! ಚಿಕ್ಕಚಿಕ್ಕ ಸಂಗತಿಗಳು ನಮ್ಮ ಊರಿನ ಜನರಿಗೆ ಮುದನೀಡುತ್ತಿದ್ದವು. ಕಷ್ಟಜೀವಿಗಳಾದ ಅವರು, ಆಧುನಿನ ಜೀವನದ ಐಶಾರಾಮಗಳನ್ನು ಅನುಭವಿಸದೆ ಕಷ್ಟ ಕೋಟಲೆಗಳ ಜೀವನವನ್ನೇ ಅನುಭವಿಸಿ, ಅದರಲ್ಲೇ ಧನ್ಯತೆ, ಸಮಾಧಾನಗಳನ್ನು ಅನುಭವಿಸಿ,  ಅದೇ ಊರಿನಲ್ಲಿ ಮಣ್ಣಾದರು !

Comments

Popular posts from this blog

ತಾಯಿಯಂತೆ ಮಗಳು ನೂಲಿನಂತೆ ಸೀರೆ !

Shri. Chitradurga Mahadev Bhatt, Bombay's one of the Great Yoga teachers during 1950s to 1980s !

ಮಧುರ ಕ್ಷಣ- ಸರಸ್ವತಿ ಸಮ್ಮಾನ್, ಪದ್ಮ ಭೂಷಣ ಪ್ರಶಸ್ತಿ ವಿಜೇತ, ಡಾ. ಎಸ್ ಎಲ್. ಭೈರಪ್ಪನವರ ಜತೆ ಸಂದರ್ಶನ !