"ನಾಟಿವೈದ್ಯ, ನಾರಾಯಣರಾಯರು"

೧೯೫೦ ರ ಸಮಯದಲ್ಲಿ, ಯಾರೂ "ಅಲೊಪತಿವೈದ್ಯಚಿಕಿತ್ಸೆ "ಗೆ ಒಳಗಾಗುತ್ತಿದ್ದದ್ದು, ಅಪರೂಪವಾಗಿತ್ತು. ಹಳ್ಳಿಗಾಡಿನ ಜನರಿಂದ ಪೇಟೆಯ ಹಳೆಯ ಸಂಪ್ರದಾಯಸ್ಥರು ಸಹಿತ, ಹೆಚ್ಚು ಕಡಿಮೆ ಎಲ್ಲರೂ "ಆಯುರ್ವೇದ " ಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದರು. ನಮ್ಮ ಮನೆಯ ವೈದ್ಯರಾಗಿ ಮಲ್ಲಾಡಿಹಳ್ಳಿಯ ನಾರಾಯಣರಾಯರು, ಸೈಕಲ್ ಮೇಲೆ ಮನೆ-ಮನೆಗಳಿಗೆ ಬಂದು ಚಿಕಿತ್ಸೆ ಮಾಡುತ್ತಿದ್ದರು. ಅವರನ್ನು ಕಂಡರೆ ಅಪ್ಪನಿಗೆ ತುಂಬಾ ವಿಶ್ವಾಸ. ಮೊದಲು ನಾವೆಲ್ಲಾ ಸೋಮವಾರದ ದಿನದಂದು "ಮಲ್ಲಾಡಿಹಳ್ಳಿ ಸ್ವಾಮಿಗಳ "ಬಳಿ ಆಯುರ್ವೇದದ ಔಷಧಿಗಳನ್ನು ಪಡೆಯುತ್ತಿದ್ದೆವು. ಆದರೆ ಬರಬರುತ್ತಾ ಮಲ್ಲಾಡಿಹಳ್ಳಿಯೂ ದೂರವೆನ್ನಿಸತೊಡಗಿದಾಗ, ಈ ಬದಲಾವಣೆಗೆ ಹೊಂದಿಕೊಳ್ಳಬೇಕಾಯಿತು.

ನಾರಾಯಣರಾಯರು, ಹೊಳಲ್ಕೆರೆಯಲ್ಲಿ ನಮ್ಮ ಚಿಕ್ಕಮ್ಮನ ಮನೆಗೆ ಬಾಡಿಗೆಗಿದ್ದ ನರಸಿಂಗರಾಯರ ಮಗ. ಮರಾಠಿಗರ ತರಹ ಪಂಚೆ ಉಡೋರು. ಸೈಕಲ್ ಮೇಲೆ ಬರುತ್ತಿದ್ದಿದ್ದರಿಂದ ಸೈಕಲ್ ಕಚ್ಚೆ-ಪಂಚೆ ಅವರು ಯಾವಾಗಲೂ ಉಡುತ್ತಿದ್ದರು.  ಅವರ ಹೆಂಡತಿ ಶಾರದಮ್ಮ, ಮತ್ತು ಮಕ್ಕಳು ನಮ್ಮ ಅಮ್ಮ ಮತ್ತು ನಮ್ಮೆಲರಿಗೂ ಪರಿಚಯವಾಗಿದೃ. ನಮ್ಮ ಮೇಷ್ಟೃ ಗೋಪಾಲ್ ರಾಯರ್ಗೂ, ಅವರು ಬಳಗ ಅಂತ ನಮ್ಮಮ್ಮ ಯಾವಾಗ್ಲೊ ಹೇಳಿದ ನೆನೆಪು. ಸೈಕಲ್ ಮೇಲೆ ಬರೋರು. ಅವರಬಳಿ, ಚಕ್ಕೆ, ಚೂರ್ಣ, ಭಸ್ಮ, ಗುಳಿಗೆಗಳು, ಕಷಾಯ ಇತ್ಯಾದಿಗಳು ಅವರ ಚೀಲದಲ್ಲಿ ಯಾವಾಗಲೂ ಇರೋದು. ಅಮ್ಮನಿಗೆ ಸ್ವಲ್ಪ ನಿಶ್ಯಕ್ತಿ ಯಾವಾಗಲೂ ಇದ್ದೇ ಇರ್ತಿತ್ತು. ಮಕ್ಕಳ ಕಾಲದಲ್ಲಿ ಅವಳು ಪಟ್ಟ ಕಷ್ಟ ಯಾವ ಶತೃವಿಗೂ ಬೇಡ. ನಮಗೂ ನೆಗಡಿ ಜ್ವರ ಕೆಮ್ಮು ಆಗಾಗ ಬರೋದು ಆಗ ನಾವು ಅವರ ಔಷಧ ತೊಗೊತಿದ್ವಿ.

ನಮ್ಮ ಊರಿನಲ್ಲಿ ಒಂದು "ಸರ್ಕಾರಿ ಆಸ್ಪತ್ರೆ " (ಲೋಕಲ್ ಫಂಡ್ ಡಿಸ್ಪೆನ್ಸರಿ)  ಇತ್ತು. ಅಲ್ಲಿಗೂ ನಾವುಗಳು, ಅಂದರೆ ಹುಡುಗರು ಹೋಗ್ತಿದ್ವಿ. ಅಲ್ಲಿ ದೊಡ್ಡ ದೊಡ್ಡ ಗಾಜಿನ ಶೀಸೆಗಳಲ್ಲಿ ಔಷಧಿಯ ಮಿಕ್ಸ್ಚರ್ ಯಾವಾಗಲೂ ರೆಡಿ ಇರ್ತಿತ್ತು. ಅದರಿಂದ ಚಿಕ್ಕ ಔನ್ಸ್ ಲೆಕ್ಕದ ಪ್ರಕಾರ ನಮಗೆ ಕೊಡೊರು. ನಾವು ಆಸ್ಪತ್ರೆಗೆ ಹೋದರೆ ಚಿಕ್ಕ ಬಾಟಲ್ ಹಿಡಿದೇ ಹೋಗಬೇಕಾಗಿತ್ತು. ದಿನಕ್ಕೆ ಮೂರು ಮಾತ್ರೆಯ ತರಹ ಮಾತ್ರೆಗಳನ್ನು ಚಿಕ್ಕ ಕಾಗದದಲ್ಲಿ ಕಟ್ಟಿಕೊಡೋರು. ಆಗ ’ಸ್ಟೆತೊಸ್ಕೋಪ್  ’ನಲ್ಲಿ ಪರೀಕ್ಶಿಸಿ, ಔಷಧಿ ಕೊಟ್ಟಾಗ ಏನೋ ಸಮಾಧಾನ ಆಗ್ತಿತ್ತು. ಔಷಧಿಯಂತೂ” ಕಾರ್ಕೋಟಿ ವಿಷ.’ ಹೊಟ್ಟೆನೋವು ಬಂದಾಗ ಬಿಳಿ ನೀರಿನ ಔಷಧಿ ಕೊಡೊರು.

ನಾರಾಯಣರಾಯರ ಕೊನೆಯ ಭೇಟಿಯೆಂದರೆ, ನಮ್ಮಪ್ಪ ಸತ್ತಾಗಿನದು. ಅದ್ಯಾಕೊ ಮತ್ತೆ ಅವರು ನಮಗೆ ಕಾಣಿಸಲೇ ಇಲ್ಲ. ಅವರ ಬಗ್ಗೆ ನಮಗೂ ಹೆಚ್ಚು ಆಸಕ್ತಿಯಿರಲಿಲ್ಲ ಎಂದು ಬೇರೆ ಹೇಳಬೇಕಾಗಿಲ್ಲ. ನಾವಂತೂ ಅಲೊಪತಿ ವೈದ್ಯ ಪದ್ಧತಿಗೆ ಹೊಂದಿಕೊಂಡಿದ್ದೆವು.  ಅಪ್ಪನಿಗೆ "ಲಕ್ವ " ಹೊಡೆದಿತ್ತು. ಆಗ ನಾವು ನಾರಾಯಣರಾಯರಿಗೆ ಹೇಳಿಕಳಿಸಿದೆವು. ಅವರು ಬಂದು ಅದ್ಯಾವುದೋ ಚಕ್ಕೆಯನ್ನು ತೇದು, ಅಪ್ಪನ ನಾಲಿಗೆಯಮೇಲೆ ಚೆನ್ನಾಗಿ ಸವರಿದರು. ಮೈಗೆಲ್ಲಾ ಎಣ್ಣೆ ಹಚ್ಚಿದರು. ನೀವಿದರು.ಆದರೆ ಅದೇನೂ ಲಾಭವಾದಂತೆ ಕಾಣಿಸಲಿಲ್ಲ. ಮನೆಯಲ್ಲಿ ನಮ್ಮಣ್ಣ ನಾಗರಾಜನಿದ್ದ. ಅವನು ಶಂಕರಡಾಕ್ಟ್ರನ್ನು ಕರೆದುಕೊಂಡು ಬಂದ. ಅವರು ತಪಾಸುಮಾಡಿ ಒಂದು "ಗ್ಲೂಕೋಸ್ ಇಂಜೆಕ್ಷನ್ " ಕೊಟ್ರಪ್ಪ. ಅದೇ ನಮಗೆಲ್ಲಾ ನೆನೆಪು. ಆದರೆ ಅದೂ ಯಾವ ಚಮತ್ಕಾರವನ್ನೂ ಮಾಡಲಿಲ್ಲ. ಕ್ಷಣಕ್ಷಣಕ್ಕೂ ಅವರ ಮೈ ಬೆವರುವುದು ಹೆಚ್ಚಾಯಿತು. ಮೈಕೈಮೇಲೆ ಸ್ವಾಧೀನ ತಪ್ಪುತ್ತಾ ಹೋಗಿ, ಮೈ ನಿಧಾನವಾಗಿ ತಣ್ಣಗಾಗುತ್ತಾ ಬಂತು. ಮಾತಾಡಲು ಪ್ರಯತ್ನ ಮಾಡುತ್ತಿದ್ದರು. ಆದರೆ, ಧ್ವನಿಯೇ ಬಾರದು. ಆಗಾಗ ಮಾಡುತ್ತಿದ್ದ ಕೈಸನ್ನೆಯೂ ಕ್ರಮೇಣನಿಂತುಹೋಯಿತು. ಅಪ್ಪ, ಅವರ ಮೈಮೇಲಿನ ಸ್ವಾಧೀನ ಕಳೆದುಕೊಂಡಿದ್ದರು.  ವಾರದ ಹಿಂದೆ ಯಾತ್ರೆಮಾಡಿಕೊಂಡು ಬಂದನಂತರ ಹಾಸಿಗೆ ಹಿಡಿದ ಅವರು, ಮೇಲಕ್ಕೇಳಲೇ ಇಲ್ಲ. ಆಗ, ನಮ್ಮಮ್ಮ, ಗಾಬರಿಪಟ್ಟುಕೊಂಡಳು.

ನಮಗೆಲ್ಲಾ ತಿಳಿದ ಮತ್ತೊಂದು ವಿಧಾನವೆಂದರೆ ದೇವರ ಧ್ಯಾನ. ಎಲ್ಲರೂ ಅದನ್ನೇ ನಂಬಿದ್ದರು. ಅಮ್ಮ, ತನ್ನ ಪರಮ ಗುರುಗಳಾದ ಬ್ರಹ್ಮಚೈತನ್ಯ ಮಹಾರಾಜರಿಗೆ ಮೊರೆಯಿಟ್ಟಳು. ನಾನು ನನ್ನ ತಮ್ಮ ಚಂದ್ರ,  ಮೂಕರಾಗಿ, ಅವಳ ಜೊತೆ ದೇವರಗೂಡಿನಬಳಿ ಕೈಮುಗಿದು ನಿಂತು ಗಂಟೆಗಟ್ಟಲೆ ದೇವರನ್ನು ಪ್ರಾರ್ಥಿಸಿದೆವು. ಆಗ ನನಗೆ ೧೫ ವರ್ಷ ವಯಸ್ಸು. ಎಲ್ಲವೂ ಅರ್ಥವಾಗುತ್ತಿತ್ತು. ತಮ್ಮನಿಗೆ ೧೩ ವರ್ಷ.

ಇಂದಿನ ದಿನಗಳಲ್ಲಿ ’ಫಿಸಿಯೋ ಥಿರಪಿ ’ ಎಷ್ಟು ಮುಂದುವರೆದಿದೆ. ”ಪೆರಾಲಿಸಿಸ್,’  ಸಾಯುವಂತಹ ಕಾಯಿಲೆ ಅಲ್ಲವೇ ಅಲ್ಲ. ಈಗಿನ ತರಹದ  ಸೌಲಭ್ಯಗಳು ಆಗ ಇರಲಿಲ್ಲ. ಮೆಡಿಕಲ್ ಕ್ಷೇತ್ರದಲ್ಲಿ ಇನ್ನೂ ಪ್ರಗತಿಯಾಗಿರಲಿಲ್ಲ. ಒಂದುವೇಳೆ ಆಗಿದ್ದರೂ  ಆ ಹೊಸ ತಂತ್ರಜ್ಞಾನ ಪದ್ಧತಿಗಳು ನಮ್ಮೂರನ್ನು ತಲುಪಲು ಹಲವಾರು ದಶಕಗಳೇ ಬೇಕಾಗುತ್ತಿತ್ತು. ಈ ಘಟನೆಯನಂತರ ಸುಮಾರು ೧೫ ವರ್ಷಗಳ ನಂತರವೂ ಇದೇ ತರಹದ ಪರಿಸ್ಥಿತಿಯಿದ್ದದ್ದನ್ನು ನೆನೆಸಿಕೊಳ್ಳಬಹುದು.  ೧೯೭೩ ರಲ್ಲಿ ನಮ್ಮ "ಅತ್ತಿಗೆ ನಾಗಮಣಿ" ಯವರು ತೀರಿಕೊಂಡಾಗಲೂ ಪರಿಸ್ಥಿತಿ ಮೊದಲಿನ ತರಹವೇ ಇತ್ತು ಎಂದು ನೆನಪಿಸಿಕೊಳ್ಳಲು ಮನಸ್ಸಿಗೆ ವಿಪರೀತ ವಿಶಾದವಾಗುತ್ತದೆ. ಅಪ್ಪನಿಗೆ ಆಗ ೬೩ ವರ್ಷ ವಯಸ್ಸು, ( ೧೮೯೫ ರಲ್ಲಿ ಜನನ)

ಅಪ್ಪ ಪ್ರತಿವರ್ಷವೂ "ಘಾಟಿ ಸುಬ್ರಹ್ಮಣ್ಯ,"  "ಉಡುಪಿ,"  " ಧರ್ಮಸ್ಥಳ" ಗಳಿಗೆ  ಹೋಗಿಬರುವ ಅಭ್ಯಾಸವನ್ನು ಮೊದಲಿನಿಂದಲೂ ರೂಢಿಸಿಕೊಂಡಿದ್ದರು. ಇದಕ್ಕೆ ಅವರು ಅಮ್ಮನನ್ನು, ಅಥವ ನಮ್ಮನ್ನು  ಕರೆದುಕೊಂಡು ಹೋಗುತ್ತಿರಲಿಲ್ಲ.  ಅವರ ದಿನಚರಿಯಲ್ಲಿ ಚಾರಿಟೀಸ್ ಅನ್ಡ್ ಪೂಜಾಸ್ ಅನ್ನೊ ಕಾಲಂನಲ್ಲಿ ಪ್ರತಿವರ್ಶದಲ್ಲೂ ಒಂದು ಎಂಟ್ರಿ ಇದ್ದೆ ಇರುವುದನ್ನು ನಾವು ಗಮನಿಸಬಹುದು.
ಆ ವರ್ಷದ ಯಾತ್ರೆ, "ಅವರ ಜೀವನದ ಕೊನೆಯ ಯಾತ್ರೆ " ಯಾಗುವುದೆಂದು ನಾವು ಕನಸುಮನಸ್ಸಿನಲ್ಲೂ ಭಾವಿಸಿರಲಿಲ್ಲ. ಬಂದವರೇ ಊಟಮಾಡದೆ, "ನನಗೆ ತುಂಬಾಸುಸ್ತಗಿದೆ ; ಎಬ್ಬಿಸಬೇಡಿ" ಎಂದು ಅಮ್ಮ, ನಮಗೆ ಹೇಳಿ ಕಂಬಳಿ ಹೊದ್ದು ಮಲಗಿದರು. ಆಮೇಲೆ ಸಾಯಂಕಾಲ ಅವರು ಎದ್ದಾಗ, ಬೆವರಿದ್ದರು. ಮಾತುಗಳು ಅಸ್ಪಷ್ಟವಾಗಿದ್ದವು. ಮುಲುಗುತ್ತಿದ್ದರು. ಮೈಯೆಲ್ಲಾ ಕಟ್ಟಿಗೆಯಂತೆ ನಿಸ್ತೇಜವಾಗಿತ್ತು. ಅಮ್ಮನಿಗೆ ಏನುಮಾಡಬೇಕೋ ತಿಳಿಯದಾಯಿತು. ಸಾಯಂಕಾಲ ನಾಗರಾಜ ಸೊಸೈಟಿಯಿಂದ ಬಂದಮೇಲೆ ಎಲ್ಲ ವಿವರಿಸಿ ಹೇಳಿದಳು. ಅವನಿಗೂ ಇವೆಲ್ಲಾ ಹೊಸದು. ವೈದ್ಯ, ನಾರಾಯಣರಾಯರಿಗೆ ಹೇಳಿಕಳಿಸಿದನು. ತಕ್ಷಣವೇ ಅವರು ಬಂದು ತಮಗೆ ತಿಳಿದ ವೈದ್ಯವನ್ನು ಮಾಡಿದರು. ಆದರೆ ಅದು ಫಲಿಸಲಿಲ್ಲವೆಂದಮೇಲೆ "ಶಂಕರಶೆಟ್ಟಿ ಡಾಕ್ಟರ್ " ಗೆ ಹೇಳಿಕಳಿಸಿದ್ದು ; ಆವರು ಮಾಡಿದ ವೈದ್ಯವೆಲ್ಲವನ್ನು ಹಿಂದಿನ ಪ್ಯಾರದಲ್ಲಿ ವಿವರಿಸಿದ್ದೇನೆ.

ಮಾರನೇ ದಿನವೂ ಶಂಕರ ಡಾ. ಬಂದಾಗ ಅಪ್ಪನ ಪರಿಸ್ಥಿತಿ ಹದಗೆಟ್ಟಿತ್ತು. ಕೈಸನ್ನೆಯೂ ನಿಂತೇ ಹೋಗಿತ್ತು. ಮಾತು ಹೊರಡುತ್ತಿರಲಿಲ್ಲ. ಕಣ್ಣುಗಳಲ್ಲಿ ಅದೇನೊ ಸನ್ನೆ ಮಾಡುತ್ತಿದ್ದರು. ಅಮ್ಮನಿಗೂ ಗೊತ್ತಾಗದಂತಹ ಆ ಸನ್ನೆಮಾತು ನಮಗೆ ಹೇಗೆ ಗೊತ್ತಾಗಬೇಕು. ನಾವು ಅಳಲು ಶುರುಮಾಡಿದೆವು. ರಾತ್ರಿ ೧೩ ಗಂಟೆಗೆ ನಮ್ಮನ್ನೆಲ್ಲಾ ಬಿಟ್ಟು ನಡೀತಿದೃ. (ಅವರಮಾತಿನಲ್ಲೇ ಹೇಳೋದಾದ್ರೆ )

ಕರ್ಮಾಂತರಗಳನ್ನು ನಾಗರಾಜ ರಾಮಕೃಷ್ಣ ಸೇರಿ ನಂಜನಗೂಡಿನಲ್ಲಿ ಮಾಡಿಕೊಂಡು ಬಂದರು. ನಮಗೆ ಮಾರ್ಗದರ್ಶನಕ್ಕೆ "ಸೂರಪ್ಪಮಾವ," " ಅಜ್ಜಿ " ಇದ್ದರು. ರಾಮದುರ್ಗದಿಂದ ಸಾವಿತ್ರಮ್ಮ ದೊಡ್ಡಮ್ಮ, ಸೋಮಸುಂದರ ರಾಯರು, ದೊಡ್ಡಪ್ಪ, ಮಗಳು ಶ್ಯಾಮಲಮ್ಮ ಬಂದಿದ್ದರು. ಅವರು ನಮಗೆ ನೆರವಾದ ಬಗೆಯನ್ನು ನೆನೆಸಿಕೊಳ್ಳಲೇ ಬೇಕು. ದೊಡ್ಡಮ್ಮ ನನ್ನು ನೋಡಿದ ನೆನಪು ಸರಿಯಾಗಿರಲ್ಲಿಲ್ಲ. ಅಮ್ಮಹೇಳುವಂತೆ, ಅಪ್ಪ ಅವರೆಲ್ಲರಜೊತೆ ಚೆನ್ನಾಗಿ ಪ್ರತಿಕ್ರಿಯಿಸುತ್ತಿದ್ದರು. ಸಹಾಯ ಪಡೆಯುತ್ತಿದ್ದರು. ಸಮಯ ಬಂದಾಗ ಸಹಾಯ ಮಾಡಿದರು.

೧೩  ದಿನಗಳ ಅಪರಕರ್ಮಗಳನ್ನು ಮುಗಿಸಿ ವೈಕುಂಠ ಸಮಾರಾಧನೆಯನ್ನೂ ಮಾಡಿ ಮುಗಿಸಲಾಯಿತು. ಅಪ್ಪನ ಇರುವಿಕೆಯಲ್ಲಿ ಅವರೇನೂ ನಮ್ಮೊಡನೆ ಹೆಚ್ಚಿಗೆ ವ್ಯವಹರಿಸಿದವರಲ್ಲ. ಅವರಾಯಿತು ಅವರ ರೂಂ ಆಯಿತು. ಒಬ್ಬ ಅತಿಥಿಯಂತೆ ಇದ್ದರೆಂದು ಒಮ್ಮೊಮ್ಮೆ ನಮಗನ್ನಿಸುತ್ತಿತ್ತು. ಆದರೂ ಅವರು ಮನೆಯಲ್ಲಿದ್ದರೆ, ಎಲ್ಲ ತುಂಬಿದಂತೆ ಇರುತ್ತಿತ್ತು. ಹೆಚ್ಚಿಗೆ ಮಾತಾಡದಿದ್ದರೂ ಒಮ್ಮೆ ಒಳಗೆ ಬಂದು "ವೆಂಕಟೇಶ್ ಸ್ವಾಮಿ," " ಚಂದ್ರಣ್ಣ ಏನ್ಮಾಡ್ತಿದಿರೊ", ಎಂದು ಕೇಳುತ್ತಿದ್ದರು. ಮಧ್ಯಾನ್ಹ ನಾವಿಬ್ಬರು ಅವರ ದಪ್ಪ ಹಾಸಿಗೆಯಮೇಲೆ, ಜೊತೆಯಲ್ಲಿ ಅಕ್ಕ ಪಕ್ಕಗಳಲ್ಲಿ ಮಲಗಿಕೊಳ್ಳುತ್ತಿದ್ದೆವು. ಅವರ ಕಂಬಳಿ ನಮಗೆ ತುಂಬಾ ಮುದಕೊಡುತ್ತಿತ್ತು. ಕಥೆ ಹೇಳುವುದಾಗಲೀ ಮುಂತಾದವುಗಳನ್ನು ನಾವು ಅವರಿಂದ ಕೇಳಿದೆವೊ ಇಲ್ಲವೊ ನೆನೆಪಿಲ್ಲ. ಮಾತು ಕಡಿಮೆಯೆ.

"ವೇದಾಂತ "ದ ಬಗ್ಗೆ ಆಸಕ್ತಿ. ಯಾವಾಗಲೂ ಜಪದ ಮಣಿ ಅವರ ಕೈಯಲ್ಲಿರುತ್ತಿತ್ತು. ಇಂಗ್ಲೀಷ್ ಪುಸ್ತಕಗಳನ್ನೂ ಓದುತ್ತಿದ್ದರು. ಬೆಂಗಾಲಿ ಲೇಖಕರ ಇಂಗ್ಲೀಷ್ ಅನುವಾದದ ಕಥೆಗಳ ಪುಸ್ತಕಗಳು ಅವರ ಕೈಯಲ್ಲಿರುತ್ತಿತ್ತು. "ಗೋರಾ," " ರೆಡ್ ಆಲೆಂಡರ್ಸ್," " ಪೋಸ್ಟ್ ಆಫೀಸ್,"  "ದಿ ಶಿಪ್ ರೆಕ್"  "ಗೀತಾಂಜಲಿ", " ಶಿವಾನಂದ" ಮುಂತಾದ ಪುಸ್ತಕಗಳು ನಮ್ಮ ಆಟ್ಟದ ಮೇಲಿನ ಮರದ ಪೆಟಾರಿಯ ತುಂಬಾ ಇದ್ದವು. ಅನಕೃ, ತರಾಸು, ಸಿದ್ದೌವ್ನ್ಹಳ್ಳಿ  ಕೃಷ್ಣಶರ್ಮ, ಗಳಗನಾಥ, ರಂಗನಾಥ ದಿವಾಕರ, ಶಿವರಾಮ ಕಾರಂತ, ಅಧ್ಯಾತ್ಮ ಪ್ರಕಾಶ, ಹೊಸಕೆರೆ ಚಿದಂಬರಯ್ಯನವರ ಪುಸ್ತಕಗಳು, ಮಹಾಶ್ವೇತೆ, ವಂಗವಿಜೇತ, ಅಂಗುಲಿಮಾಲ,  ಪುಸ್ತಕಗಳಿಗೆ ಕೊನೆಯಿಲ್ಲ ಮೊದಲಿಲ್ಲ. ಅದೇ ಅಭ್ಯಾಸ ನನ್ನ ದೊಡ್ಡಮಗ ರವೀಂದ್ರನದು. ಅದೆಶ್ಟು ಪುಸ್ತಕಗಳನ್ನು ಕೊಂಡಿದಾನೊ ಅವನು. ಅತಿಯಾಗಿ ಓದುವ ಹವ್ಯಾಸವಿತ್ತು. "ಟೆಲಿವಿಶನ್ "ಬಂದನಂತರ ಆ ಗೀಳು ಸ್ವಲ್ಪ ಕಡಿಮೆಯಾಯಿತು, ಅನ್ನುವುದಕ್ಕಿಂತಾ ಇಂದಿನ ದಿನಗಳಲ್ಲಿ ಅವನಿಗೆ ಸಮಯ ದೊರೆಯುತ್ತಿಲ್ಲ.

ನಮ್ಮ "ಲಕ್ಷಿನ್ದೇವಕ್ಕ" ಸಹ ಅಪ್ಪನಿಗೆ ಬಲು ಪ್ರೀತಿಯ ಮಗಳು. ಆ ಅಕ್ಕನ ಮಗಳೇ "ನಾಗಮಣಿ." ಅವಳನ್ನು ರಾಮಕೃಷ್ಣನಿಗೆ ತಂದುಕೊಳ್ಳಬೇಕೆಂಬ ಆಶೆ ಅವರಿಗಿತ್ತು. ಸಹಾ ಇಷ್ಟವಿತ್ತು. ಆದರೆ ಆ ದಿನಗಳಲ್ಲಿ ಜಾತಕಕ್ಕೆ ವಿಶೇಷ ಮಹತ್ವ ಕೊಡುತ್ತಿದ್ದರು. ಅಪ್ಪ ಜ್ಯೋತಿಷ್ಯದಲ್ಲಿ ಅಪಾರ ನಂಬಿಕೆ ಇಟ್ಟವರು. ಅದನ್ನು ಒಂದು ಅಧ್ಯಯನದ ರೀತಿಯಲ್ಲಿ ತಮ್ಮ ಜೀವನದಲ್ಲಿ ರೂಢಿಸಿಕೊಂಡಿದ್ದರು. ಅವರು ಹೇಳಿದ ಪ್ರಕಾರ "ಜೇಷ್ಟಾ ನಕ್ಶತ್ರದ ಹುಡುಗಿ" ಯಾದ್ದರಿಂದ ಅವಳು ಯಾರಮನೆ ಸೇರಿದರೂ ಮೊದಲ ಸೊಸೆಯಾಗಿ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ನಾಗರಾಜನಗೆ ಇಷ್ಟವಿತ್ತು. ಜಾತಕದ ಪ್ರಕಾರ ಅಂತಹ ಪ್ರಶಸ್ತ-ಜೋಡಿಯಾಗಲಾರದೆಂದು ಹೇಳಿದ್ದರು. ಹೇಗೋ ಕೊನೆಗೆ ಅವರಿಬ್ಬರ ವಿವಾಹ ನಡೆಯಿತು. ನಮ್ಮ ಅಮ್ಮನ ತವರು ಮನೆಯ ಕಡೆಯ ಹುಡುಗಿಯೊಬ್ಬಳು, ನಮ್ಮ ಮನೆಯನ್ನು ಬೆಳಗಲು ಬಂದಳು. ಆಕೆ ನಮಗೆಲ್ಲಾ ಅತ್ಯಂತ ಅಚ್ಚುಮೆಚ್ಚಾಗಿ ನಮಗೆ ಎಷ್ಟು ಪರಿಚಯವೋ ಎನ್ನುವಂತೆ ಹೊಂದಿಕೊಂಡಳು.

ದೊಡ್ಡಮ್ಮನಿಗೆ ಒಬ್ಬನೇ  ಮಗ-"ಸೀನಣ್ಣ " ಅಂತ. ಅವನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯದಲ್ಲಿ ಆಫೀಸರ್ ಆಗಿದ್ದ. ಮತ್ತು ೬ ಜನ, ೫  ಹೆಣ್ಣುಮಕ್ಕಳು. ಲಕ್ಷಿಂದೇವಿ, ವಿಶಾಲಾಕ್ಷಿ, ಕಾಮಾಕ್ಷಿ, ಮೀನಾಕ್ಷಿ, ಶ್ಯಾಮಲ. ಹಳ್ಳಿಯಲ್ಲೇ ಇದ್ದರು. ನಮ್ಮ ಭಾವನವರು, (ಸೂರಣ್ಣ ಮಾವನ ಮಗ) ಆಕೆಯನ್ನು ಮದುವೆಯಾಗಿದ್ದರು. ಈಗ ಮಗನಮನೆಯಲ್ಲಿ ಬಂದಿದ್ದರು.ದೊಡ್ಡಪ್ಪ ಸ್ಕೂಲ್ ಟೀಚರ್ ಆಗಿದೃ. ಸ್ವಲ್ಪ ತಮಾಷೆ ಸ್ವಭಾವ. ಎಲ್ಲರಮೇಲೂ ಹಾಡ್ಕಟ್ಟೊದು ಹೇಳಿ ನಗ್ಸೊದು. ನ್ಯಶ್ಯ ಹಾಕೋರು. ಅಡಿಗೆ ಕೆಲಸದಲ್ಲಿ ನಮ್ಮ ದೊದ್ಡಮ್ಮ ವಿಶಾರೆದೆ. ಅಲ್ಲವು ಅಚ್ಚುಕಟ್ಟು. ಅದೆಶ್ಟು ಬಗೆಯ ಪಲ್ಯಗಳು, ಪುಡಿಗಳು, ಚಟ್ಣಿಗಳು, ತೊಕ್ಕು, ಉಪ್ಪಿನಕಾಯಿ ಎಲ್ಲವೂ ಅತಿರುಚಿ. ಅಮ್ಮನಿಗಿಂತ ದೊಡ್ಡವರಲ್ಲವೆ. ಅಡುಗೆಯಲ್ಲೂ ಸಹಿತ ಎನ್ನಬಹುದೇನೊ. ಆ ಪರಿವಾರ ನಮಗೆ ಕೊಟ್ಟ ಮಾನಸಿಕ ಸಮಾಧಾನ ಅತಿ ಸಮಾಧಾನಕರವಾಗಿತ್ತು. ಸ್ವಲ್ಪಸಮಯದ ಬಳಿಕ ದೊಡ್ಡಮ್ಮ ದೊಡ್ಡಪ್ಪ ಊರಿಗೆ ವಾಪಸ್ಸಾದರು. ಶ್ಯಾಮಲ ಮಾತ್ರ ಸ್ವಲ್ಪದಿನವಿದ್ದು ನಮಗೆ ನೆರವಾದಳು.

ಅಮ್ಮನ ಮತ್ತೊಬ್ಬ ಅಕ್ಕ, "ಕಲ್ಪಿ" ಯಲ್ಲಿದ್ದರು. ನಮ್ಮಭಾವನವರ ಹೆಸರು, ಶಂಕರಪ್ಪ. ಅಲ್ಲಿನ ಶ್ಯಾನುಭೋಗರಾಗಿದ್ದರು. ಕಲ್ಪಿ ವಿದುರಾಶ್ವತ್ಥಕ್ಕೆ ಸಮೀಪ. ಕಲ್ಪಿಯಲ್ಲಿ ಬತ್ತದ ಗದ್ದೆಗಳು ಎಲ್ಲೆಲ್ಲೂ ಹಸಿರು. ನೀರಿನ ವ್ಯವಸ್ಥೆಯೂ ಚಿನ್ನಾಗಿತ್ತು. ಅವರ ಪ್ರೀತಿಯ ಮಗಳೇ ನಾಗಲಕ್ಷ್ಮಿ. ಅವಳ ಮದುವೆಗೆ ನಮ್ಮ ರಾಮಕೃಷ್ಣ ಹೋಗಿದ್ದ. ಅದೆಷ್ಟು ವಿಶ್ವಾಸ, ಪ್ರೀತಿ ಅಲ್ಲಿನ ಜನರದು. ನಮ್ಮ ಚಂದ್ರ ಹುಟ್ಟಿದ್ದು ಕಲ್ಪಿಯಲ್ಲೇ. ಆಮೇಲೆ ಅವರ ಸಂಬಂಧ ನಮಗೆ ತಪ್ಪೇ ಹೋಯಿತು. ಇಲ್ಲ. ನಾವು ಸಂಬಂಧಗಳನ್ನು ಹಿಡಿದಿಡುವಲ್ಲಿ ಅಸಮರ್ಥರಾದೆವು ಎನ್ನಬಹುದೇನೊ. ಅದಕ್ಕೆ ನಮ್ಮ ಮನೆಗ ಬಂದು ಹೋಗುವವರು ಇಲ್ಲವೇ ಇಲ್ಲ. ಇದು ಗಮನಿಸಬೇಕಾದ ಸಂಗತಿ.

ಅಮ್ಮನಿಗೆ ಒಬ್ಬ ಅಣ್ಣ-ಸೂರ್ಯನಾರಾಯಣರಾವ್. ಅಕ್ಕಂದಿರು, ಲಕ್ಷ್ಮೀದೇವಮ್ಮ (ಕೈಮುರಿದಿರುವ ದೊಡ್ಡಮ್ಮ) ಕಲ್ಪಿ, ರಾಮದುರ್ಗ, ಅಜ್ಜಿ, ಅಜ್ಜ, ಅಶ್ವತ್ಥನಾರಾಯಣರಾಯರು. ಅಣ್ಣ ಗುಂಡಣ್ಣ, ಗಂಗವಾರದಲ್ಲಿ ಇದ್ದರು. ಅಮ್ಮ ಜನಿಸಿದ್ದು ದೇವನಹಳ್ಳಿಯಲ್ಲಿ ಅದಕ್ಕೆ ಅವಳ ಹೆಸರು, ಡಿ. ರಾಧಮ್ಮಯೆಂದು. ಅಜ್ಜಿಯಿಂದ ಬೆಂಗಳೂರಿಗೆ ಕುದುರೆಯಮೇಲಿ ಕುಳಿತು ಬರೊರಂತೆ. ಅಂದರೆ ಆಶ್ಚರ್ಯವೇನಿಲ್ಲ. ಬೇರೆ ಯಾವ ವಾಹನಗಳೂ ಇಲ್ಲದಿದ್ದರೆ ಕುದುರೆ ಅಥವಾ ಕುದುರೆಗಾಡಿ ಎಲ್ಲವೇ ಎತ್ತಿನ ಬಂಡಿಮೇಲೆ ತಾನೇ ಬರಬೇಕು. ಮಾವಳ್ಳಿಲಿ ಇದ್ದಮನೆ ನಮ್ಮಜ್ಜಿ ತವರುಮನೆಯವರು ಕೊಟ್ಟಿದ್ದು. ಅದು ದೊಡ್ಡದಾಗಿತ್ತಂತೆ. ಅಜ್ಜಿನೆ ನಗಗೆ ಯಾವ್ದೊ ಮಾತ್ಬಂದಾಗ ಹೇಳಿದೃ. ಮಕ್ಕಳ ಮದುವೆ ಸಂದರ್ಭಬಂದಂತೆಲ್ಲಾ ಮನೆ ಭಾಗಗಳನ್ನು ಮಾರಿ ಮಾರಿ ಸ್ವಲ್ಪಮಾತ್ರ ಉಳಿಸಿಕೊಂಡಿದ್ದರು. ಆ ಸ್ವಲ್ಪವೇ ದೊಡ್ಡಮನೆ. ಆಮೇಲೆ ಮತ್ತೆ ಮಾರಿ ಚಿಕ್ಕಮನೆಲೆ ಇದೃ. ಈಗ ೧೦ ವರ್ಶಗಳ ಹಿಂದೆ, ದೂರ್ದಲ್ಲಿ ಕಟ್ಸಿದ್ದ ಮನೆನ ಮಾರಿ ಮಾವಳಿನಲ್ಲೆ ಮೊದಲು ಮಾರಿದ್ದ ಮನೆಗಳ್ನ ತಾವೇ ಖರೀದಿಸಿ ದೊಡ್ಡದಾಗಿ ಕಟ್ಶಿದಾರೆ. ಮಹಡಿಮನೆ. ಚೆನ್ನಾಗಿ ಅನುಕೂಲವಾಗಿದೆ. [ಮೈಸೂರ್ ರೋಡ್ ನಲ್ಲಿ ಒಂದು ದೊಡ್ಡಮನೆ ಕಟ್ಸಿದೃ] ಮಾವಳ್ಳಿ, ಎಲ್ಲಾದಕ್ಕೂ  ಹತ್ರ ಇದೆ. ನಮ್ಮಕ್ಕನ ನೆಂಟರೆಲ್ಲ ಇರುವುದು ಅಲ್ಲೇ.  ಎಲ್ಲಕ್ಕೂ ಅನುಕೂಲವಾಗಿದೆ. ಅದೇ ಜಾಗ ಎಲ್ಲರಿಗೂ ಇಷ್ಟ

ನಮ್ಮ ಮಾವ ಸೂರಣ್ಣನವರು, ಬೆಂಗಳೂರಿನ,  "ಕೃಷ್ಣರಾಜೆಂದ್ರ ಮಾರ್ಕೆಟ್ " ಹತ್ತಿರದ "ಹಳೆತರಗು ಪೇಟೆಯ ಮಂಡಿ "ಯಲ್ಲಿ ಗುಮಾಸ್ತರಾಗಿ ಕೆಲಸಮಾಡ್ತಿದೃ.  "ರಾಮಣ್ಣ " ನೌಕರಿಮಾಡ್ತಿದೃ. ಆಮೇಲೆ ಅವ್ರೇ ಒಂದು ಖಾಸಗಿ "ಏಜೆಂಟ್ " ಕೆಲಸ ಶುರುಮಾಡಿದೃ. ಒಂದು ಗಾಡಿ ಇಟ್ಕೊಂಡಿದೃ. ಅದನ್ನು ನಡೆಸಕ್ಕೆ ಒಬ್ಬ ಸಾರಥಿ, ಎತ್ತು ಇದ್ದವು. ಆಮೇಲೆ ಆ ಕೆಲ್ಸನೂನಿಲ್ಸ್ ಬೇಕಾಯಿತು. ಅದರಲ್ಲೂ ಸ್ಪರ್ಧೆ ಮತ್ತು ಅದನ್ನು ನಿಭಾಯಿಸಲು ನಮ್ಮ ಭಾವನವರಿಗೂ ವಯಸ್ಸಾಗಿತ್ತು. ಮಗ ಸೊಸೆ ಒಪ್ಪದೆ, ಕೆಲಸ ನಿಲ್ಲಿಸಬೇಕಾಯಿತು. ಒಬ್ಬನೇ ಮಗ "ಅಶ್ವತ್ಥ". ಅವನ ಹೆಂಡತಿ "ಉಷಾ" . ಟೆಲಿಫೋನ್ ನಿಗಮದಲ್ಲಿ ಕೆಲಸಮಾಡುತ್ತಿದ್ದಾರೆ. . ಈ ದಂಪತಿಗಳ ಒಬ್ಬಳೇ ಮಗಳು "ನಾಗಲಕ್ಷಿ."  ಓದ್ನಲ್ಲಿ ಕೆಲಸದಲ್ಲಿ ಎಲ್ಲದರಲ್ಲೂ ಜಾಣೆ.

Comments

ತಿಮ್ಮಮ್ಮಜ್ಜಿಯ ಚಿತ್ರ, ಮತ್ತು ಸೂರಪ್ಪಮಾವ, ಮತ್ತು ನಂಜಮ್ಮತ್ತೆಯವರ ಜೊತೆ-ತ್ರ ಇದ್ದರೆ, ಕೊಡ್ತೀರಾ ಯಾರಾದೃ ?
ಅತ್ತೆ-ಮಾವನವರ ಜೊತೆ-ಚಿತ್ರ ಅಂತ ನಾನು ಹೇಳಿದ್ದು...

Popular posts from this blog

ತಾಯಿಯಂತೆ ಮಗಳು ನೂಲಿನಂತೆ ಸೀರೆ !

Shri. Chitradurga Mahadev Bhatt, Bombay's one of the Great Yoga teachers during 1950s to 1980s !

ಮಧುರ ಕ್ಷಣ- ಸರಸ್ವತಿ ಸಮ್ಮಾನ್, ಪದ್ಮ ಭೂಷಣ ಪ್ರಶಸ್ತಿ ವಿಜೇತ, ಡಾ. ಎಸ್ ಎಲ್. ಭೈರಪ್ಪನವರ ಜತೆ ಸಂದರ್ಶನ !