Saturday, May 8, 2010

’ ಬಾಲ್ಯದ ದಿನಗಳಲ್ಲಿ, ಹೊಳಲ್ಕೆರೆಯಲ್ಲಿ ನಾವುಕಂಡ, ಮದುವೆ ದಿಬ್ಬಣಗಳು !

ಮದುವೆಗಳು ಯಾವಾಗಲೂ ಅದ್ಧೂರಿಯಿಂದ ನಡೆಯುತ್ತವೆ. ಹಳ್ಳಿಯಿರಲಿ, ದಿಳ್ಳಿಯಿರಲಿ ; ಜನ, ತಮ್ಮ ಮಕ್ಕಳ ವಿವಾಹವನ್ನು ಸಾಧ್ಯವಾದಷ್ಟು ಮಟ್ಟಿಗೆ ಚೆನ್ನಾಗಿಯೇ ಮಾಡಿಕೊಡುತ್ತಾರೆ. ಈಗಲೂ ಭಾರತದಲ್ಲೇ ಅತಿಹೆಚ್ಚಿನ ಬಂಗಾರದ ಒಡವೆಗಳ ಬಳಕೆಯಾಗುತ್ತಿದೆ. ಸಾಲಮಾಡಿಯಾದರೂ ಅತಿ-ಹೆಚ್ಚು ಖರ್ಚುಮಾಡುವ ಅಭ್ಯಾಸವೂ ಭಾರತದ ಮಧ್ಯಮವರ್ಗದ ಮನೆಗಳಲ್ಲಿ ಇಂದಿಗೂ ಬಳಕೆಯಲ್ಲಿವೆ. ಆದ್ರೂ ಸ್ವಲ್ಪ ಸಣ್ಣ-ಪುಟ್ಟ ತೃಟಿಗಳು ಬರುವುದು ಸಹಜ. ’ಎಷ್ಟು ಗಾಡಿ ನೆಂಟರು’ ಬಂದಿದ್ದರು ಎನ್ನುವುದರಮೇಲೆ, ಮದುವೆಯ ಸಂಭ್ರಮಗಳು, ಏರ್ಪಾಟುಗಳು, ಅವಲಂಬಿಸಿರುತ್ತದೆ. ಯಾರನ್ನು ಕೇಳಿದರೂ ’ಮಾಲ್ದಿ’ ಮಾಡಿದ್ವಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.

ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ, ಮದುವೆ ದಿಬ್ಬಣದ ಮೆರವಣಿಗೆ-ಗಾಡಿ ಬರೋದು. ನಾವು ಚಪ್ಪಲಿ ಹಾಕಿಕೊಂಡು ”ಟಪ್-ಟಪ್ ’ಶಬ್ದ ಮಾಡುತ್ತಾ ಮನೆಯ ಒಳಗಿನಿಂದ ಹೊರಗೆ ನಡೆದು ಬರುತ್ತಿದ್ದೆವು. ಕಗ್ಗತ್ತಲ ರಾತ್ರಿಯಲ್ಲಿ, ಲಾಟೀನು ಹಿಡಿದು ಬರುವುದು ಒಳ್ಳೆಯದು ; ಹುಳ-ಹುಪ್ಪಟಗಳ ಕಾಟ ಯಾವಾಗಲೂ ಇರ್ತಿತ್ತು. ಹೊರಗಿನ ತಲೆಬಾಗಿಲನ್ನು  ಪೂರ್ತಿಯಾಗಿ ತೆರೆದು ಕಲ್ಲಿನ ಮೆಟ್ಟಿಲಿನ ಮೇಲೊ ಅಥವಾ ಕಟ್ಟೆಯಮೇಲೊ ಲಾಟೀನು ಇಡುತ್ತಿದ್ದೆವು. ಮದು-ಮಕ್ಕಳ ಹೆಸರು ಹೇಳಿಸುವಶಾಸ್ತ್ರ, ಅಲ್ಲಿ ಅತಿ-ಮುಖ್ಯವಾದದ್ದು. ಅದೇ ಒಂದು ಸಂಪ್ರದಾಯವೆನ್ನಬೇಕು. ಇಬ್ಬರೂ ಹೆಸರು ಹೇಳಲು ನಾಚಿಕೆಪಟ್ಟುಕೊಳ್ಳೋರು. ಹಿರಿಯರು, ಮತ್ತು ಬಳಕೆಯ ಸ್ನೇಹಿತರು ಹೇಳೆಂದು ಧರ್ಯಕೊಟ್ಟಮೇಲೆ ’ಪಾರವ್ವ’, ’ಇಶಿರಪ್ ಮಾಮ’ ಎಂದು ಹೇಳುವ ಸನ್ನಿವೇಶವನ್ನು ವರ್ಣಿಸುವುದು ಬಹಳ ಕಷ್ಟ.

ಎಷ್ಟು ಹೆಚ್ಚು ನಾಚಿಕೆಯಿಂದ ಹೇಳುತ್ತಾರೆ ಅಷ್ಟು ಅವರಲ್ಲಿ ಅನುರಾಗ ಹೊಂದಾಣಿಕೆಗಳಿವೆ ಎಂದು ಅಲ್ಲಿನ ಹಿರಿಯಮಹಿಳೆಯರು ತೀರ್ಮಾನಕ್ಕೆ ಬರುತ್ತಿದ್ದರು. ತೆಂಗಿನ ಕಾಯಿಯನ್ನು ಎತ್ತಿನ ಬಂಡಿಯ ಮುಂದೆ ನಿವಾಳಿಸಿ ಜೋರಾಗಿ ನೆಲಕ್ಕೆ ಅಪ್ಪಳಿಸಿ ಒಡೆಯುತ್ತಿದ್ದರು. ಗಾಡಿಯ ಹಿಂದೆ ವರ, ವಧುವಿನ ಮನೆಯವರ ಪರಿವಾರಗಳ ಬಂಡಿಗಳೂ ಸಾಲಾಗಿ ಹೋಗುತ್ತಿದ್ದವು. ಮಣ್ಣಿನ-ರಸ್ತೆಯ ಧೂಳು ಅಲ್ಲಿನ ವಾತಾವರಣವನ್ನು ಆವರಿಸುತ್ತಿತ್ತು. ನಾವು ಅರಿಸಿನ-ಕುಂಕುಮದ ಭರಣಿಗಳನ್ನುಇಟ್ಟುಕೊಂಡು ಕಾದಿರುತ್ತಿದ್ದೆವು. ಬಂದವರೇ, ’ಅಮ್ಮಾರಿಗೆ’ ’ಅಯ್ಯನೋರ್ಗೆ, ನಮಸ್ಕಾರ ಮಾಡಿ’ ’ಆಸೀರ್ವಾದ ಪಡಿಯಪ್ಪ’ ಅನ್ನೋರು. ಹಿರಿಯ ಮುತ್ತೈದೆಯರು, ವಧೂ-ವರರಿಗೆ ಹಾರಹಾಕಿಸಿ, ಹಣೆಗೆ ತಿಲಕ ಇಟ್ಟು, ಆರತಿ ಬೆಳಗಿ, ಆಶೀರ್ವದಿಸುತ್ತಿದ್ದರು. ಮದುವೆ ಗಾಡಿ ಮುಂದೆ ನಿವಾಳಿಸಿ, ತೆಂಗಿನಕಾಯಿಗಳನ್ನು ಒಡೆಯುವ ಪದ್ಧತಿ, ಯಾವಾಗಲು ಇತ್ತು.

ಅತಿ ಪ್ರಮುಖ ವಿಶಯವೆಂದರೆ,  ಇನ್ನೂ  ೧೦-೨೦ ಅಡಿಹೋಗಲಿಕ್ಕಿಲ್ಲ, ಅಲ್ಲೊಂದು ಗುಂಪು, "ಸರಿ ಎಸರ್ ಏಳ್ರಪ್ಪೊ ನಿಮ್ದಮ್ಮಯ್ಯ," ಅಂತನ್ನೊರು.  ಹೊಸದಂಪತಿಗಳಿಗೆ,  ಇದೊಂದು ಕಿರಿಕಿರಿಯ ಸನ್ನಿವೇಷ.  ಸತಿ-ಪತಿಯರ ಬಾಯಿನಲ್ಲಿ ಅವರವರ ಪ್ರಿಯರ ಹೆಸರುಹೇಳಿಸುವ ವಾಡಿಕೆ ! ಅವರೆಷ್ಟು ಸರಿ ಹೇಳಿದರೂ, ಕಿರಿ-ಹಿರಿಯರೆಗೆ ಸಮಾಧಾನವಾಗುತ್ತಿರಲಿಲ್ಲ. ಮುಗ್ಧ ದಂಪತಿಗಳು ನಾಚುತ್ತಾ ಸಂಕೋಚಪಡುತ್ತಾ ಹೊಸಜೀವನ ಹೇಗಿರುವುದೋ ಎಂದು ಅಚ್ಚರಿಪಡುತ್ತಾ, ಉಲಿಯುವ ನುಡಿಗಳು ಸುಮಧುರವಾಗಿರುತ್ತವೆ.

ಊರಿನ-ಪೇಟೆಯಲ್ಲಿ ನಡೆಯುವ ಶೆಟ್ಟರ ಮನೆ ಮದುವೆಗಳು, ಇಲ್ಲವೇ ಜೋಡಿ-ಸಾಹುಕಾರರ ಮನೆಯ ಲಗ್ನಗಳು ಸಾಮಾನ್ಯಜನರಿಗೆ ಖುಶಿಕೊಡುವುದು ಅಲ್ಪವೇ. ಅದಕ್ಕೇ ನಮ್ಮಮ್ಮ ಹೇಳುತ್ತಿದ್ದದ್ದು, "ಸಾವ್ಕಾರ್ ರ ಮನೆ ನೋಟಚೆನ್ನ ; ಬಡವರಮನೆಯ ಊಟಚೆನ್ನ" ವೆಂದು. ಶೆಟ್ಟರ ಮನೆ ಮದುವೆಗಳು, ಅವರ ’ಕನ್ನಿಕಾಪರಮೇಶ್ವರಿ ಅಮ್ಮ ’ನವರ ಸನ್ನಿಧಾನದಲ್ಲಿ ನಡೆಯುತ್ತಿದ್ದವು.  ದಿಬ್ಬಣ, ಮೆರವಣಿಗೆ ಶಾಸ್ತ್ರ, ಇದ್ದಂತಿಲ್ಲ. ಆಮೇಲಾಮೇಲೆ ತೆರೆದ ಕಾರಿನಲ್ಲಿ ಮೆರವಣಿಗೆ ಬರುತ್ತಿತ್ತು. ಆದರೆ, ನಮ್ಮ ಪುಟ್ಟ ರಸ್ತೆಯಲ್ಲಿ ಬರಲು ಅಡಚಣೆ ಇತ್ತಲ್ಲ. ಎರ್ಡೂಕಡೆ ಬಂಡಿಗಳನ್ನು ನಿಲ್ಲಿಸುತ್ತಿದ್ದರು. ಕೆಲವೊಮ್ಮೆ ಎತ್ತುಗಳೂ ರಸ್ತೆಯ ಬದಿಯಲ್ಲೇ ಆರಾಮ್ ಮಾಡುತ್ತಿದ್ದವು.

ಎಲ್ಲಕ್ಕಿಂತ ಮಿಗಿಲಾದದ್ದು, ನಮ್ಮ ಕೆಸರುತುಂಬಿದ ರಸ್ತೆ. ನಮಗೇ ಬೇಸರವಾಗುತ್ತಿತ್ತು. ಕಾರಿನ ಹಿಂದೆ, ಒಳ್ಳೆಯ ಉಡುಪನ್ನು ಹಾಕಿಕೊಂಡು ಸಿಂಗರಿಸಿಕೊಂಡು ಬರುವ ಧನಿಕರ ಹೆಣ್ಣುಮಕ್ಕಳು, ಕೆಸರಿನ ರಸ್ತೆಯಲ್ಲಿ ನಡೆದುಬರುವುದೆಂದರೇನು ?

ಮೇಲೆ ಹೇಳಿದ ಕೆಲವು ಸಮಸ್ಯೆಗಳಾದರೆ, ಮುಖ್ಯವಾದದ್ದು, ಕುಡಿಯುವ ನೀರಿನ ಸಮಸ್ಯೆ. ೮-೧೦ ಗಾಡಿಯ ತುಂಬಾ ಬಂದ ಅತಿಥಿಮಹಾಶಯರನ್ನು ನಿಭಾಯಿಸಲು ನೀರನ್ನು ತರುವುದಾದರೂ ಎಲ್ಲಿಂದ ? ಮುಂದೆ, ಮದುವೆಗಳ ಸ್ಥಾನ ಚಿತ್ರದುರ್ಗ, ಇಲ್ಲವೇ, ’ಶಾಗ್ಲೆಹಳ್ಳ’ದಮೆಲಿರುವ ’ಸಿರಗೆರೆ-ಮಠ’ದಲ್ಲಿ ನಡೆಯಲು ಶುರುವಾಯಿತು. ಕೊನೆ-ಕೊನೆಗೆ ಮಂಗಳ-ಕಾರ್ಯಗಳು ನಮ್ಮ ಊರಿನಲ್ಲಿ ಸ್ಥಗಿತಗೊಳ್ಳಲಾರಂಭಿಸಿದವು. ಊರಿನ ಶಿಕ್ಷಿತ-ಯುವಕರೆಲ್ಲಾ ಬೇರೆ ನಗರಗಳತ್ತ ಹೋಗಲಾರಂಭಿಸಿದರು. ನಾವೂ ಅದೇಜಾಡಿನಲ್ಲಿ ಸಾಗಿದೆವಲ್ಲ.

No comments:

Post a Comment