ಅಡಿಕೆ ಸಿಪ್ಪೆ, ತೊಗರಿಕಡ್ಡಿ, ಸಾಸುವೆ ಕಡ್ಡಿ....ಗಳ್ನ ಜಮಾ ಮಾಡೋ ಆಟ"

ನಮಿಗೆ ಆಟದ್ ತರ್ಹ ಇದೃ,  ಅದು ಒಂದು ಅನಿವಾರ್ಯವಾದ ಕೆಲಸದ ಒಂದುಭಾಗವಾಗಿತ್ತು. ಹಸಿ ಸೌದೆ ಇಟ್ಕೊಂಡು ಒಲೆ ಉರಸ್ತಾ ಅಡ್ಗೆ ಮಾಡೋ ಅಮ್ಮನಿಗೆ ಸ್ವಲ್ಪವಾದರೂ ಸಹಾಯ ಇದ್ರಿಂದಾಗ್ತಿದೆಯಲ್ಲಾ ಅನ್ನೊ ಸಮಾಧಾನದ ಬೆಲೆ ಬೇರೆ ಯಾವ್ಕೆಲ್ಸದಿಂದಾನೂ ಸಿಗ್ತಿರ್ಲಿಲ್ಲ. ಈ ಸಪ್ಪೆದಂಟು,  ಕಡ್ಡಿ, ಸಿಪ್ಪೆ, ಹೊಟ್ಟು ನಮ್ ರೈತ್ರಿಗೆ ಬೇಡ್ವೆ ? ಅಂದ್ರೆ ಅವರ್ಗೂ ಬೇಕು. ಅವ್ರೆಲ್ಲಾ ವಾರಕ್ಕೊಂದ್ಸಲ, ಸ್ವಾಮ್ವಾರ, ಆದ್ಮೇಲೆ ತಿರ್ಗಾ ಬರೋ ಸ್ವಾಮ್ವಾರ ಮಾತ್ರ ಅಲ್ವ ಸ್ನಾನ ಮಾಡೊದು.ಅಡ್ಕೆ ತೋಟ ತೆಂಗಿನ್ ತೋಟ ಇರೋರ್ಗೆ ಬೇಕಾದಷ್ಟು ಸಾಮಗ್ರಿ ಸಿಗೊದು. ಒಲೆ ಉರ್ಸಕ್ಕೆ ಕಟ್ಗೆ ಅವ್ರೆಂದೂ ಕೊಂಡೋರೆ ಅಲ್ಲ !  ಅದ್ರಿಂದ  ಅಡಿಕೆ ಸಿಪ್ಪೆ, ತೊಗರಿಕಡ್ಡಿಗಳ್ನ  ನಮ್ಮನೆಲಿ ಎಲೃ  ತಂದಿರೊರೆ. ನಾನು ನನ್ ತಮ್ಮ, ಶ್ರೀರಂಗ, ಶ್ರೀಧರ ಕೂಡ. ಬೆಂಗ್ಳೂರ್ ನಿಂದ ಅಶ್ವತ್ಥ ಬಂದಿದ್ದ. ಅವನ್ಗೂ ನೆನೆಪಿದೆಯಂತೆ. ಯಾವಾಗ್ಲಾದೃ ನೆನೆಸ್ಕೊಂಡ್ ನಗ್ತಾನೆ. ಹೊಳಲ್ಕೆರೆ ಆಚಾರಪ್ಪ, ಅವನ್ ಹೆಂಡ್ತಿ, ನೂರ್, ನಿಂಗಪ್ಪ, ಶಿವಮೂರ್ತಿ, ದಳ್ಳಾಳಿ ರಾಮಪ್ಪ, ಚಿದಂಬ್ರಪ್ಪ, ಮತ್ತಿತರ ನೆನಪು ಇನ್ನೂ ಮಾಸಿಲ್ಲ.

ಬಚ್ಚಲ್ಮನೆಗೆ ಬೇಕಾದ ಸೌದೆ ಬದಲ್ಗೆ ಉಪ್ಯೋಗ್ಸೊ ಹೊಟ್ಟು, ಕಡ್ಡಿ, ಮಟ್ಟೆ, ಚಿಪ್ಪು ಇತ್ಯಾದಿಗಳಲ್ಲದೆ,  ನೆಲಗಡಲೆ ಕಾಯಿ ಸಿಪ್ಪೆ, ಅಕ್ಕಿ ತೌಡು, ಇತ್ಯಾದಿಗಳೂ ಈ ವರ್ಗಕ್ಕೆ ಸೇರತ್ವೆ.  ನಮ್ಮನೆ ಹತ್ರ, ರೈತಾಪಿಜನರೇ ಹೆಚ್ಚು. ಅವರ ಕಣಗಳಲ್ಲಿ ಕೊಯ್ಲಿಗೆ ಬಂದಿರೋ ತೊಗರಿಕಡ್ಡಿ, ಸಾಸುವೆ ಕಡ್ಡಿ ಇತ್ಯಾದಿಗಳ್ನ ಶುದ್ಧಿಮಾಡಿ ಅದರಲ್ಲಿರೊ ಕಾಳುಗಳನ್ನು ಬೇರ್ಪಡಿಸೋ ಕೆಲಸ ನಡ್ಯತ್ತೆ. ಕಣದ ತುಂಬಾ ಹರಡಿಕೊಂಡಾಗ, ಅವರು ತಮ್ಮ ತಮ್ಮ ಮನೆಯ ಮುಂದೆ, ರಸ್ತೆಗಳಲ್ಲಿ ಕಾಳು ತೂರೊದು ಇತ್ಯಾದಿ ಮಾಡ್ತಾರೆ.

ಆಗ ನಾವೇನಾದೃ ಕಂಡ್ರೆ ಬೇಕಾದ್ರೆ ತೊಗೊಂಡ್ ಓಗ್ರವ್ವ ; ಏಳಿ, ಅಮ್ಮಾರೆ,  ನಮ್ಮ ಸಿವಣ್ಣಂಗ್ ಏಳ್ಲೇನು ನಿಮ್ಮನೆಗೆ ತಂದೊಟ್ತಾನೆ. ಅನ್ನೊರು. ಆಗ ನಮ್ಮಮ್ಮ ನಮ್ಮನ್ನ ಕರೆದು, " ಎರುರ್ಗಡೆ ಇದ್ಯಲ್ಲ ಜಯಣ್ಣನ್ ಮನೆ ಅಲ್ಲಿ ಹೋಗಿ ತೊ ಸಾ ತೊಗೊಂಡ್ ಬನ್ರೊ" ಅನ್ನೋಳು. ನಾವ್ ಓಡ್ ಹೋಹಿ ಅವನ್ನೆಲ್ಲಾ ಆರ್ಸ್ಕೊಂಡು ತರ್ತಿದ್ವಿ. ಅದಕ್ಕೂ ಅಕ್ಕ ಪಕ್ಕದ ಬ್ರಾಹ್ಮಣರ್ ಮನೆಯೋರ್ಜತೆ ಸ್ಪರ್ಧೆ ನಡಿತಿತ್ತು. ಅಡ್ಕೆ ಕಾಯ್ ಸಿಗ್ದು,  ಅದರ ಹೊರಕವಚ-ಅಂದ್ರೆ ಸಿಪ್ಪೆನ ಹಾಕಿರೋರು. ನಮಗೆ ನೀರ್ ಕಾಯ್ಸಕ್ಕೆ ಅದು ಒಳ್ಳೆ ಸೌದೆ ತರ ಕೆಲ್ಸಕ್ ಬರ್ತಿತ್ತು. ರಾತ್ರಿನೇ ನೀರೊಲೆಗೆ ಆ ಸಿಪ್ಪೆ ಒಟ್ಟಿ ಬೆಂಕಿ ಹಚ್ಚಿ ಇಟ್ರೆ ಸಾಕು ಬೆಳಿಗ್ಯೆ ಏಳೊ ಹೊತ್ಗೆ ಸಕತ್ ಆಗಿ ನೀರ್ ಕಾಯ್ತಿತ್ತು.

ತೆಂಗಿನ್ ಮಟ್ಟೆ, ಜುಂಜು, ಎಲೆ, ನಾರು, ಚಿಪ್ಪು, ನೀರ್ಕಾಯ್ಸಕ್ಕೆ ಹೇಳಿಮಾಡ್ದಂಗ್ ಕೆಲ್ಸಮಾಡ್ತವೆ. ಬೆರಣಿ ಇಲ್ದೆ ನೀರೊಲೆ ಹಚ್ಚಕ್ ಸಾಧ್ಯವೇ ಅಂತ ಆಗ ನಮಗನ್ಸಿತಿತ್ತು. ಸಗಣಿ ಅದ್ರಲ್ಲೂ ಹಸುವಿಂದು ಅದೆಷ್ಟು ಶ್ರೇಷ್ಟವೊ ನಮ್ಮಮ್ಮ ಅದರ ಬಗ್ಗೆ ಒಂದ್ ಭಾಷ್ಣನೇ ಬಿಗಿಯೊಳು. ಎಂಜಲ್ ಗೋಮ ಮಾಡಕ್ಕೆ ಸಗಣಿ ಇಲ್ದೆ ಸಾಧ್ಯವೇ ಇಲ್ಲ. ದೇವ್ರ ಗೂಡಿನ್ ಮುಂದೆ ಗುಡ್ಸಿ, ಸಾರ್ಸಿ, ರಂಗೋಲಿ ಇಟ್ಟಾಗ ಏನ್ ಚೆನ್ನಾಗಿರ್ತಿತ್ತು ಅಂತ. ಮನೆ ಶುಚಿ ಮಾಡೊವಾಗ್ಲಂತು ಹಸುವಿನ ಗಂಜಲ ಪ್ರಮುಖಪಾತ್ರ ವಹಿಸ್ತಿತ್ತು.

ತಿಪ್ಪೆ :

ಇದು ಹಳ್ಳಿ ಜೀವನ ಗೊತ್ತೀರೊರ್ಗೆ ಮಾತ್ರ ತಿಳ್ಯೊ ವಿಚಾರ. ಹಸು, ಎಮ್ಮೆ, ದನ ಕಟ್ಗಂಡಿರೊರು, ಬೆಳಿಗ್ಯೆ ಎದ್ದು ಕೂಡ್ಲೆ ಸಗಣಿ ಗಂಜ್ಲ ಎಲ್ಲ ಜಮಮಾಡಿ, ಪುಟ್ಟಿಯಲ್ಲಿ ತಲೆಮೇಲೆ ಇಟ್ಕೊಂಡು ಊರಿನ ಹೊರಗೆ ಅವರ ತಿಪ್ಪೆಹಿತ್ಲಿಗೆ ತಂದು ಸುರುಯೊರು. ಅಲ್ಲಿ ಸಗಣಿ, ಸಪ್ಪೆದಂಟು, ಗಂಜಲ, ಬೂದಿ, ಎಲ್ಲ ಕೊಳ್ತು ಒಳ್ಳೆ ಗೊಬ್ರ ಆಗೋದು. ಹೊಲದಲ್ಲಿ "ಗೊಬ್ರ "  ಅಂದ್ರೆ ಇದನ್ನೆ ಉಪಯೋಗ್ಸಿದ್ರು. ಇದಕ್ಕೆ "ಕಾಂಪೊಸ್ಟ್ ಗೊಬ್ರ" ಅಂತ ಆಮೇಲೆ ಇಂಗ್ಲೀಷ್ ನಲ್ಲಿ ಕರೆದ್ಮೇಲೆ ಅದಕ್ಕೆ ಬಲು ಬೆಲೆ ಬಂತು. ನಮ್ಮ ಊರಿನ ಬಹಳ ಜನರ ಹೆಸರು ತಿಪ್ಪೇಶ, ತಿಪ್ಪೆಸ್ವಾಮಿ, ತಿಪ್ಪಣ್ಣ, ತಿಪ್ಪಾಭಟ್ರು, ತಿಪ್ಪಮ್ಮ, ಇತ್ಯಾದಿಗಳು ತಿಪ್ಪೆಗಿರುವ ಮಹತ್ವವನ್ನು ವರ್ಣಿಸುತ್ತವೆ. ಯಾರೂ ತಿಪ್ಪೆ ಅಂತ ಅಸಹ್ಯ ಪಟ್ಟುಕೊಳ್ಳದೆ ಅದರ ಮಹತ್ವವನ್ನು ಚೆನ್ನಾಗಿ ಅರಿತಿದ್ದರು. ಮನೆಯ ಒಳಗೆ ಬಂದರೆ ಸಾಕು ಸಗಣಿಯ ವಾಸನೆ. ಈಗ ಅದನ್ನು "ಅಬ್ಬ ಸಗಣಿ ನಾತ " ವೆಂದು ಮೂಗು ಮುಚ್ಚಿಕೊಳ್ಳುತ್ತಾರೆ. ಆದರೆ ನಮಗೆ ಆ ವಾಸನೆ ಬಹಳ ಹಿಡಿಸಿತ್ತು. ಈಗ ಏನೋ ಹೇಳಲಾರೆ !

ಈಗಿನ "ಆರ್ಗ್ಯಾನಿಕ್ ತೋಟ "ದಿಂದ ಬಂದ ತರಕಾರಿ, ಕಾಯಿಪಲ್ಯದ ಉತ್ಪಾದನೆಗಳು ವಿಶ್ವಮಾನ್ಯತೆ ಪಡೆದಿವೆ. ನಮ್ಮ ಬಡಪಾಯಿ ರೈತ, ತನ್ನ ಜೀವನ ನಿರ್ವಹಣೆಗೆ ಪರಿಪಾಟಲು ಪಡುವವ, ರಸಾಯನ ಗೊಬ್ಬರದ ಪೂರೈಕೆ ಮಾಡಿಯಾನೆ ? ಈಗ ಕೇವಲ ಒಂದು "ಪ್ರಮಾಣಪತ್ರ "ವನ್ನು ಆಧಾರವಾಗಿಟ್ಟುಕೊಂಡು ತರಕಾರಿ, ಹಣ್ಣುಹಂಪಲುಗಳ ಮೇಲೆ " ಆರ್ಗ್ಯಾನಿಕ್ ಲೇಬಲ್" ಅಂಟಿಸುವುದರ ಮೂಲಕ ಅವುಗಳ ಬೆಲೆಯನ್ನು ಗಗನಕ್ಕೇರಿಸಿ, ಜನಕ್ಕೆ ಮರುಳುಮಾಡಿದಾರೆ,

ಅಂದ್ರೆ ತಪ್ಪೆ ! ನಮ್ಮ ಮಹಾರಾಷ್ಟ್ರದ ಶೇತ್ಕಾರಿಗಳು (ರೈತರ್ನ ಹಾಗೆ ಕರಿಯೋದಲ್ಲಿ) ಈ ಮಹತ್ವದ ವಿಚಾರ ಅರಿತ್ಕೊಂಡು ಅದೇನ್ ಲಾಭ ಗಿಟ್ಸ್ತಿದಾರೆ ! ದೇವ್ರಿಗೇ ಗೊತ್ತು. "ವಿಧರ್ಬ ಬೆಂಗಾಡ್ ಪ್ರೆದೇಶ " ಮಳೆ ಕಡಿಮೆ. ಅಲ್ಲಿನ ಮುಖ್ಯ ಬೆಳೆ ಹತ್ತಿ. ನಮ್ಮ ಹಾಗೆ ಅಲ್ಲಿನ್ ರೈತೃ, ಬಡವರು. ಸಾಲಮಾಡಿ ಹತ್ತಿ ಬೀಜನ ಖರೀದಿಸ್ತಾರೆ. ಆ ಬೀಜದಲ್ಲಿ ಬರೋ ಹೀನ ಬೆಳೆಯಿಂದ ರೋಸಿಹೋಗಿ, ತೊಗೊಂಡಿರೊ ಸಾಲ ತೀರಿಸ್ಲಾರ್ದೆ, ನೇಣ್ ಹಾಕ್ಕೊಂಡ್ ಸಾಯೊರೆಷ್ಟ್ ಜನಾನೊ. ಪೇಪರ್ನಲ್ಲೋದಿ ಓದಿ ಬ್ಯಾಸರವಾಗುತ್ತೆ. ಆದೃ, ಕೆಲವ್ ಜನ ಪುಣ್ಯಮಾಡಿದಾರೆ. ನಮ್ಮ ಶರದ್ ಪವಾರ್ ಊರಿದೆಯಲ್ಲ-ಬಾರಾಮತಿ, ಅಲ್ಲಿನ ಜನಕ್ಕೆ ಎಲ್ಲ ಸೌಲತ್ ಗಳೂ ಸಿಕ್ಕು, ನೆಮ್ಮದಿಯಿಂದ ಬದುಕ್ತಿದಾರಪ್ಪ. ಕಬ್ಬು ಬೆಳ್ಯೊ ರೈತರಂತೂ ರಾಜ್ರಂಗಿದಾರೆ.

ಹೊಳಲ್ಕೆರೆಯ ಭಾವಿಗಳು :

"ಪೇಟೆ ಬಾವಿ "ಲಿ ನೀರ್ ತರೊದು ಸಿ ನೀರ್ ಮಾತ್ರ. ಆ ಭಾವಿ ಹೊನ್ನೆಕೆರೆ ಮರಳ್ನಲ್ಲಿತ್ತು. ಇನ್ನೂ ಮುಂದೆ ಹೋದರೆ ೨ ಭಾವಿ ಸಿಕ್ಕೊದು. ಅವೆಲ್ಲ ಉಪಯೊಗವಿಲ್ಲ. ಅಲ್ಲೆಲ್ ಬರ್ಬೇಕು ನೀರು ಜಲ ಇದ್ರೆ ತಾನೆ. ಇಲ್ಲೂ ನಾವು ಒಂದಿ ತಂಬ್ಗೆ ಕಟ್ಟಿ ಇಳಿಬಿದ್ತಿದ್ವಿ. ಅದು ಕೆಳಕ್ಕೆ ಹೋದಮೇಲೆ ಗುಳುಗುಳು ಶಬ್ದ ಬಂದು ನೀರ್ ತುಂಬ್ಕೊಳ್ಳದು. ಅದನ್ನು ಮೇಲೆ ಸೇದಿ ಕೊಡಕ್ಕೆ ಸುರಿಬೇಕು. ಹೀಗೆ ಸುಮಾರು ೧೦-೧೨ ಬಾರಿ ನೀರ್ ಮಗ್ದ್ ಹಾಗಿದ್ ಮೇಲೆ ಒಂದ್ ಬಿಂದ್ಗೆ ನೀರ್ ಸಿಗ್ತಿತ್ತು. ಆದ್ರೆ ಕುಡಿದ್ನೋಡಿದರೆ ಸಕ್ರೆ ಪಾನ್ಕ. ಬಾಯಾರ್ಕೆ ದಣಿವವು,  ಎಲ್ಲಾ ಒಂದೇ ಸರ್ತಿಗೆ ಹೊರ್ಟೊಗ್ ತಿತ್ತು.

ನಮ್ಮೂರ್ನಲ್ಲಿ, ನಲ್ಲಿ-ನೀರ್ ಬಂದ್ಮೇಲಿನ್ ಮಾತು :

ರಾಜ್ಯದಲ್ಲಿ ಎಲ್ಲಾ ಊರ್ನಲ್ಲೂ ನೀರಿನ ವ್ಯವಸ್ಥೆ ಆದಮೇಲೆ ನಮ್ಮಊರಿನ ಸರದಿ. ಅಥವಾ ಭಾರತದಲ್ಲೇ ಎಲ್ಲ ರಾಜ್ಯಗಳಲ್ಲಿ ಸ್ರಕಾರದ ಪ್ರಗತಿಯ ಕೆಲ್ಸ ಮುಗಿದ್ಮೇಲೆ ನಮ್ಮೂರಿಗೆ ತಾನೇ ಬರೋದು. ಹೊಳಲ್ಕೆರೆ  ಪೇಟೆ ಪ್ರದೇಶದಲ್ಲಿ ಒಂದು "ಓವರ್ ಹೆಡ್ ಟ್ಯಾಂಕ್" ಕಟ್ಟಿದೃ, ಅದು ಅಮಲ್ದಾರ್ ಮನೆಹತ್ರನೇ ಇತ್ತು. "ಹೊನ್ನೆ ಕೆರೇನೂ ಹತ್ರನೇ ಅಲ್ವ". ಅಲ್ಪಸ್ವಲ್ಪ ಜಲ ಸಿಗ್ಬೋದು ಅನ್ನೊ ಲೆಕ್ಕಾಚಾರ ಇರ್ಬೋದೇನೊ,  ಯಾರಿಗ್ ಗೊತ್ತು. ಊರ್ನಲ್ಲಿ ಎಲ್ಲೆಲ್ಲಿನೋಡಿದೄ ಚೌಕಾಕಾರದ ನಲ್ಲಿ ಕಟ್ಟೆ, ಕೊಳಾಯಿನ ಮೂತಿ ಕೆಳ್ಗೆ ಕೊಡಪಾನ ಇಡಕ್ಕೆ ಒಂದಿಷ್ಟ್ ಜಾಗ ಮಡಿದೃ. ಗಲ್ಲಿ ಗಲ್ಲಿಗಳಲ್ಲೂ ಈ ತರಹದ ಕಟ್ಟೆಗಳೇ ಕಣೋವು. ನೀರ್ ಮಾತ್ರ ನಲ್ಲಿಲಿಲ್ಲವೆ ? ಕೇಳಿದ್ರೆ, ಇನ್ನೂ ಮೇಲಿನ್ ಟ್ಯಾಂಕ್ ತುಂಬಿಲ್ಲ. ಜಲ ಇಲ್ಲ. ಅನ್ನೊರು. ಅದ್ಯಾವಾಗ್ ಜಲ ಬರ್ತುದೊ ಟ್ಯಾಂಕ್ ತುಂಬ್ತುದೊ, ಹೇಳೊರ್ ಯಾರು ? ಮೇತಿಂಗಳುಮುಗಿದು ಜೂನ್ ಶುರು ಆಯಿತ್ ನೋಡಿ ಒಂದೆರ್ಡ್ ಬಾರಿ ಮಳೆ ಬಂದಿದ್ದೆ ತಡ, ಟ್ಯಾಂಕ್ ತುಂಬ್ತ್ರಿ, ಅಂತ ಮೇಸ್ತ್ರಿ ಬಂದೇಳ್ದ. ನಲ್ಲಿಲಿ ನೀರು ಬರೊದ್ ಶುರುಆಯ್ತು. ಜನಗಳೆಲ್ಲಾ ಕೊಡ, ಪಾತ್ರೆ, ಹಂಡೆ, ಡಬರಿ, ಗಂಗಾಳಗಳನ್ನೆಲ್ಲ ಹೊತ್ಗಂಡು ಬಂದು ಒಬ್ಬರ ಮ್ಯಾಲ್ ಒಬೃ ಬಿದ್ದು, ನೀರ್ ಹಿಡ್ಯಕ್ ಶುರು. ನಲ್ಲಿ ತಿರ್ಪು ಎಲ್ ಮುರಿತದೊ ಅನ್ನೊ ಗಾಬ್ರಿ, ನಮ್ಗೆಲ್ಲ !

ಸಿಕ್ಕೊರ್ಗ್, ಸಿಕ್ತು, ಇಲ್ದೊರ್ಗಿಲ್ಲ. ಸ್ವಲ್ಪ ಹೊತ್ತಾದ್ ಮೇಲೆ ಅದೆ ನಿಂತೋತು. ಹಳ್ಳಿ ಹೆಂಗಸ್ರೆಲ್ಲ ಹೊಲದ್ ಕೆಲ್ಸ ಬಿಟ್ಟು ಕಾದಿದ್ದೆಲ್ಲ ವ್ಯರ್ಥವಾಗೊತು. ದಿನವೆಲ್ಲಾ ಜನಕ್ಕೆ ಅದೇ ಗೀಳು ; ನೀರ್ ಬಂದ್ ತಕ್ಷ್ಣ ತಾವೇ ಮೊದ್ಲು ಹಿಡಿಬೇಕು ಅನ್ನೊದು.

ನಮ್ಮ ಚಿಕ್ಕಮ್ಮನವರು ಆಗಾಗ ನೀರ್ ಹಿಡಿಯಕ್ ಹೋಗೋರು. ಮಡಿ ಮೈಲಿಗೆ ಅನ್ನೊ ವಿಚಾರ ಬೇರೆ ಜನರಿಗೆ ಗೊತ್ತಾಗೊದ್ ಹೇಗೆ ಮತ್ತೆ. "ಮೈಗೆ ಮೈ ತಗಲ್ಸ್ ಕೊಂಡೇ ಹೋಗೊರು, ಶನಿಮುಂಡೇವು". "ಅಮ್ಮಾರು ಬಂದುದಾರೆ, ಅರಿಗ್ ನಿಂತ್ಗಂಡು ಜಾಗ ಬಿಟ್ಕೊಡ್ಬೇಕು ಅನ್ನೊದ್ ಅವಕ್ ಎಲ್ ಬರ್ಬೆಕು ಜ್ಞಾನ " ! ನಮ್ಮ ಚಿಕ್ಕಮ್ಮ ಅಲ್ಲಿರೊ ಹುಡ್ಗ್ರು, ಬೇರೆ ಹೆಂಗಸ್ರನ್ನೆಲ್ಲಾಬೈದು, ತಮ್ಮ ಕೊಡನ ನಲ್ಲಿ ಬಾಯಿನ ಕೆಳಗಿನ ಕಲ್ಲಿನಮೇಲಿಟ್ಟು ಬಿಂದ್ಗೆ ನ ಚೆನ್ನಾಗ್ ಗಲಬರಿಸಿ, ತೊಳ್ದು ಇಡದನ್ನು ಅವರುಗಳು ನೋಡಿದ್ದೂ ನೋಡಿದ್ದೆ. ಅಮ್ಮಾರ ನೀರ್ ಓಗ್ತದೆ ಎಚ್ಚು ನೀರ್ ಉಪ್ಯೊಗ್ಸ್ ಬ್ಯಾಡಿ ಅಂತ ಅವರ್ಗೇ ಹೇಳ್ ಬಿಡೊದೆ. ಚಿಕ್ಕಮ್ಮಂಗೆ ಸಿಟ್ಟು ನೆತ್ತಿಗೇರೋದು. ಒಂದೊಂದೆ ಕೊಡನ ತುಂಬ್ಸಿ, ಕಂಕುಳ್ನಲ್ ಒಂದ್ ಬಿಂದ್ಗೆ, ಕೈನಲ್ ಒಂದನ್ನ ಕಷ್ಟದಿಂದ ಎತ್ಕೊಂಡು ನೀರ್ ಸಿಡ್ಸೊರಿಂದ ಬಚಾವ್ ಆಗಿ ಬಂದ್ರೆ, ರಸ್ತೆಯ ಬಿಸಿ ಬಿಸಿ ಸುಡೊ ಮರ್ಳು. ರಾಮರಾಮ ಅದೇನು ಕಷ್ಟ ಕೊಟ್ದಾನಪ್ಪ ಆ ದೇವೃ ಅನ್ಸಿಬಿಡೊದ್,  ಪಾಪ ಅವ್ರಿಗೆ.

ನಮ್ಮಮ್ಮ ಅಷ್ಟೇನು ಮಡಿ ಅಂತ ಒದ್ದಾಡ್ತಿರ್ಲಿಲ್ಲ. "ಅವೆಲ್ಲಾ ಮಾಡಿ ಸೈ ಅನ್ನಸ್ಕೊಳ್ಳೋದು ಕಷ್ಟ ಕಣೋ," " ನನ್ ಕೈಲಾಗಲ್ಲಪ್ಪ." ಅನ್ನೊರು ನಮ್ಮಮ್ಮ. ಕೆಲವರು, ಹೆಂಗಸ್ರು ನಮ್ಮನ್ ನೋಡಿ ಆಡ್ಕೊಳ್ಳೋರು. ಮಡಿ ಮೈಲಿಗೆ ಎಲ್ಲಾ ಮರ್ತ ಬಿಟ್ಟಿದಾರೆ ಈಯಮ್ಮ ಅನ್ನೊರು.

Comments

Popular posts from this blog

ತಾಯಿಯಂತೆ ಮಗಳು ನೂಲಿನಂತೆ ಸೀರೆ !

ಮಧುರ ಕ್ಷಣ- ಸರಸ್ವತಿ ಸಮ್ಮಾನ್, ಪದ್ಮ ಭೂಷಣ ಪ್ರಶಸ್ತಿ ವಿಜೇತ, ಡಾ. ಎಸ್ ಎಲ್. ಭೈರಪ್ಪನವರ ಜತೆ ಸಂದರ್ಶನ !

Shri. Chitradurga Mahadev Bhatt, Bombay's one of the Great Yoga teachers during 1950s to 1980s !