Monday, May 3, 2010

'ಏನಪ್ಪ ರಂಗಣ್ಣ ಗೊತ್ತಾಯ್ತೆ ನಾನ್ ಹೇಳಿದ್ದು ' !

'ಹೊಳಲ್ಕೆರೆಯ  ನಮ್ಮ ಕರಿ ನಾಟಿ ಹಂಚಿನ ಮನೆ ರಿಪೇರಿ '

ಅಪ್ಪನ ಸಮಯದಲ್ಲೇ ನಮ್ಮ ಹಳೆ ಕಪ್ಪು ಹಂಚಿನ ಮನೆ ರಿಪೇರಿ ನಡೆಯಿತು. ನಮ್ಮ ಹಿತ್ತಲಿನಲ್ಲಿ ಚಿಕ್ಕಪ್ಪನ ಮನೆಯ ಕಾಂಪೌಂಡ್ ಗೋಡೆಗೆ ಅಂಟಿದಂತಿದ್ದ  ತೆಂಗಿನ ಮರದ ರೆಟ್ಟೆಗಳು ನಮ್ಮ ಮನೆಯ ಸೂರಿನ ಹೆಂಚಿನಮೇಲೆ ಬಿದ್ದು ಸೂರು ಬಗ್ಗಿಹೋಗಿತ್ತು. ಮಳೆಗಾಲದಲ್ಲಿ ನೀರು ದಡಗುಟ್ಟಿಕೊಂಡು ಗೋಡೆಗಳ ಮೇಲೆಲ್ಲಾ ಸೋರುತ್ತಿತ್ತು. ಅದಲ್ಲದೆ, ನಮ್ಮ ಅಡುಗೆಮನೆಯ ದೇವರ ಗೂಡು, ಸ್ವಲ್ಪ ಅರೋಡಾಗಿತ್ತು. ಇದನ್ನು ಸರಿಪಡಿಸಲು ನಿರ್ಧರಿಸಿದ ನಮ್ಮ ಅಪ್ಪಾರವರು ಅವರ ಸಂಬಂಧಿ ಮತ್ತು ದೂರದ ದಾಯಾದಿಯಾಗಿದ್ದ, ಸೇತೂರಾಮಯ್ಯನವರನ್ನು ಮನೆಗೆ ಕರೆದುಕೊಂಡು ಬಂದು ತೋರಿಸಿದರು. ಸೇತಣ್ಣ ಮನೆಯ ಪರಿಸ್ತಿತಿಯನ್ನು ಪರಿಶೀಲಿಸಿ, ಒಬ್ಬ ಮನುಷ್ಯನನ್ನು ಗೊತ್ತುಮಾಡಿಕೊಟ್ಟರು. ಅವನೇ ' ಬಸವನಾಳಿ.' ಅವನು ಆಗಿನ ಕಾಲದ ’ಕಪ್ಪುಹೆಂಚಿನ ಸೂರನ್ನು ರಿಪೇರಿಮಾಡುವಲ್ಲಿ ನಿಸ್ಸೀಮ,’ ನೆಂದು ಹೆಸರುಗಳಿಸಿದ್ದ. ಅದೂ ಅಲ್ಲದೆ ಹೊಳಲ್ಕೆರೆಯ ಶ್ಯಾನುಭೋಗರ ನಂಬಿಕೆಯಾದ ಮನುಷ್ಯನಾಗಿದ್ದ. ಅದರಿಂದ ಸೇತಣ್ಣನ ಕೃಪೆಯಲ್ಲಿದ್ದ.

ಅಪ್ಪನಿಗೆ ಸೇತಣ್ಣ ವಿವರಿಸುತ್ತಿದ್ದ ಬಗೆ,  ನಮಗೆ ಮೋಜುನೀಡಿತ್ತು.' ಏನಪ್ಪ ರಂಗಣ್ಣ ಗೊತ್ತಾಯ್ತೆ ನಾನ್ ಹೇಳಿದ್ದು ' ಎನ್ನುವ ಸಾಲುಗಳನ್ನ ಒಂದು ಗಂಟೆಗೆ ೧೦ ಬಾರಿಯಾದರೂ ಹೇಳುತ್ತಿದ್ದರು.  ೬ ನಿಮಿಷಕ್ಕೊಮ್ಮೆ. ತೆಂಗಿನ ಹುರಿಬಾಳಿಕೆ ಬರಲ್ಲ. ಏನಿದ್ದರೂ ಅಂಬಳೆ ಬಳ್ಳಿಯಲ್ಲಿ ಚೆನ್ನಾಗಿ ಬಿಗಿದು ಕಟ್ಟಿದರೆ ಮಾತ್ರ ಸಾಧ್ಯವೆನ್ನುವುದು ಅವರ ಮಾತಿನ ತಾತ್ಪರ್ಯವಾಗಿತ್ತು. ಆದರೆ ಅಂಬಳೆ ಬಳ್ಳಿ ಸಿಗುವುದು ಕಷ್ಟ. ಅದೂ ಅಷ್ಟು ದೊಟ್ಟಮನೆಗಾಗುವಷ್ಟು. ಸಾವಿರಾರು ಗಜ ಉದ್ದದ ಬಳ್ಳಿಯನ್ನು ಹುಡುಕುವುದಾದರು ಹೇಗೆ.  ಬಸವನಾಳಿಗೆ ಆ ಕೆಲಸವನ್ನು ಒಪ್ಪಿಸಿದರು.  ಅವನು ಶ್ಯಾನುಭೋಗರ ಮಾತಿಗೆ ಇಲ್ಲವೆನ್ನುವ ಆಸಾಮಿಯಂತೂ ಅಲ್ಲ. ಅವನಲ್ಲದೆ ಅಂಬಳೆಬಳ್ಳಿಯ ಬಗ್ಗೆ ತಿಳಿದವರು ಯಾರೋ ಕೆಲವು ಹಿರಿಯರಿದ್ದರು. ಅವರು ಹೊಳಲ್ಕೆರೆಯಲ್ಲಿಲ್ಲ. ಬಸವನಾಳಿ, 'ಸೊಮ್ಯಾರ,  ನನಗೆ ನಾಕ್ ದಿನ ಟೈಮ್ ಕೊಡ್ರಿ.'  'ನೋಡಿ ಏನಿದೃ ಏಳ್ತೀನಿ.' ಕರಿಗುಡ್ಡದ ಬೇವಿನ್ಮರದ್ ತೋಪ್ನಾಗೆ ಇಂತಾ ಬಳ್ಳಿ ಅವೆ, ಅಂತ ದ್ಯಾವಪ್ಪ ಆಗಾಗ ಏಳೊನು,'  ಒಂದ್ಸಲ ನೋಡೇ ಬಿಡ್ವ.' ಈ ಬಳ್ಳಿ ಬಳ್ಸೊರ್ಯಾರ್ಸದ್ಯ ಈದಿನ್ದಾಗೆ. ’ಅದೄ ಶ್ಯಾನುಭೋಗೃ ಏಳ್ತಾ ಅವ್ರೆ. ಸರಿ ನೊಡ್ವ ಒಂದ್ ಕೈನ.’ ಒಂದು ವಾರದ ಮೇಲೆ ಸರಿಯಾಗ್ ಬಂದ  ನೋಡಿ ಬಸವನಾಳಿ. ಬಂದವ್ನೆ,  ಅಮ್ಮನ ಎದೃಗೆ ಕೂತು ಹಾಡು ಹೇಳಕ್ಕೆ ಸುರು. ಆಗ ನಮಗೆ ಗೊತ್ತಾಗಿದ್ದು ಬಹುಶಃ ಬಳ್ಳಿಸಿಕ್ಕಿರಬೇಕು. ಅಂತ. ಏನು ಹೇಳ್ವಲ್ಲ. ಶ್ಯಾನ್ ಭೊಗೃ ಬರ್ಲಿ ಎಲ್ಲ ಏಳೇಬಿಡ್ತಿತಿ. ಅಂತಾನೆ .

ನಾವು ಸೇತಣ್ಣನಿಗೆ ಹೇಳಿಕಳಿಸಿದೆವು. ಸೇತಣ್ಣ ಬಂದವನೇ 'ಏನಪ ಬಸವನಾಳಿ ಖುಶಿಯಾಗಿದಿ.' 'ಸಿಕ್ತು ಅಂತ ಕಾಣ್ಸದೆ. ಏನ್ಸಮಾಚಾರ ' 'ಗೊತ್ತಾಯ್ತ್  ಬಿಡ್ರಿ. ಸೊಮೆರ. ಅದೇನ್ ಪುಣ್ಯನೊ ಈ ರಂಗಣ್ಣೊರ್ದ, ಅಮ್ಮವ್ರ್ದು, ಸಿಕ್ಕೆ ಬಿಡ್ಬೇಕೆ. ಬಳ್ಳಿಗಳು ಭಾರಿ ಬೆಳ್ಕಂಡವೆ. ಆದ್ರೆ ಮನೆಗೆಲ್ಲಾ ಆಗ್ತವೆ ಅನ್ನೊ ಬರವಸೆ ಇಟ್ಕಾಬ್ಯಾಡಿ 'ಅಂದ.' ಸರಿ ಬಸವನಾಳಿ. ನೊಡು ಸೂರು, ಬಚ್ಚಲ್ಮನೆ ಸೂರು ಬಳ್ಳಿನಲ್ಲೇ ಬಿಗ್ದ್ ಕಟ್ಟು ಗೊತ್ತಾತೇನಪ್ಪ. ಬೇರೆ  ತೆಂಗಿನ ಹುರಿ ತಂದ್ಕೊಡ್ತಾನ್ ನಮ್ಮ ರಂಗಣ್ಣ. ಸರಿಯೆನಪ ರಂಗಣ್ಣ,  ನಾನ್ ಹೇಳಿದ್ದು ತಿಳಿತೆ ನಿನ್ಗೆ'

ಸುಮಾರು ಒಂದು ಒಂದೂವರೆ ತಿಂಗಳು ನಡೆದ ಈ ದುರಸ್ತಿಕಾರ್ಯದಲ್ಲಿ ಮನೆಯಲ್ಲಿ ಆದ ಧೂಳು ಕೊಳಕು ಅತಿಯಾಗಿದ್ದು, ತುಂಬಾ ತೊಂದರೆಯಾಗಿತ್ತು. ಮನೆಯ ಸೂರು ಮತ್ತು ದಪ್ಪವಾದ ಮಣ್ಣಿನ ಗೋಡೆಗಳನ್ನು ನಯವಾಗಿ ಮತ್ತೆ ಗಿಲಾವ್ ಮಾಡಿಸಿದ ಕೆಲಸ ಮಾತ್ರ.ನೆಲಕ್ಕೆ ಸಿಮೆಂಟ್, ಮನೆಗೆ ಲೈಟ್, ಮುಂತಾದ ಮರಾಮತ್ ಕೆಲಸಗಳನ್ನು ಮಾಡಿದ್ದು, ನಾಗರಾಜನ ಕಾಲದಲ್ಲಿ.

ಅಪ್ಪನ ರೂಂನ ಪದಾರ್ಥಗಳನ್ನೆಲ್ಲಾ ನಡುಮನೆಗೆ, ತಂದಿದ್ದಾಯ್ತು.  ಛಾವಣಿಗಳಿಗೆ ಹೊಸ ಬಿದುರು ಮೆಳೆಗಳನ್ನು ಸೀಳಿ ಹೊಂದಿಸಿ ಬಲವಾದ ಬಳ್ಳಿಯಲ್ಲಿ ಬಿಗಿದರು. ಬಳ್ಳಿಯನ್ನು ಹಂಡೆಯ ನೀರಿನಲ್ಲಿ ಸುಮಾರು ೪ ಗಂಟೆಗಳ ಕಾಲ ಕುದಿಸಬೇಕು. ಆಗ ಅದನ್ನು ತಂಪುಮಾಡಲು ತಣ್ಣೀರಿನಲ್ಲಿ ಸುಮಾರು ಒಂದು ಗಂಟೆಯಾದರೂ ನೆನೆಹಾಕಬೇಕು. ಆಗ ಅದರ ಬಲ ಹೆಚ್ಚಿರುವುದನ್ನು ಕಾಣಬಹುದು. ಅದು ತಕ್ಷಣವೇ ಮುರಿಯುವ ಸಾಧ್ಯತೆಗಳು ಇರುವುದಿಲ್ಲ. ಬಸವನಾಳಿ ತಂದ ಬಳ್ಳಿಗಳಲ್ಲಿ ಅಡಿಗೆ ಮನೆ, ನಡುಮನೆ ಮತ್ತು ಹೊರಗೆ ಅಂಗಳದ ಛಾವಣಿಯ ಕೊನೆಯ ಭಾಗಗಳನ್ನು ಕಟ್ಟಲು ಬಳ್ಳಿ ದೊರೆಯಿತು. ಬೇರೆ ಸೂರುಗಳಿಗೆ ತೆಂಗಿನ ದಾರವನ್ನು ಕಟ್ಟಿದರು. ಹೆಂಚುಗಳು ಮುರಿದಿದ್ದವು. ಅದಕ್ಕೆ ಹೊಸದಾಗಿ ಹೆಂಚನ್ನು ತಯಾರಿಸಲಾಯಿತು. ಅಲ್ಲೂ ಹಿಂದಿನ ಹೆಂಚಿನ ತಡತ ಇವಕ್ಕೆಲ್ಲಿ ಎನ್ನುವ ಉದ್ಗಾರ ತಪ್ಪಿದ್ದಲ್ಲ. ಹಳೆಯದೆಲ್ಲಾ ಒಳ್ಳೆಯದೆನ್ನುವ ವಾದ. ಹೀಗೆ ಬಳ್ಳಿಗಳನ್ನು ಉಪಯೋಗಿಸುವ ಪದ್ಧತಿ ಇನ್ನೂ ನನ್ನ ಮನಸ್ಸಿನಲ್ಲಿ ಹಸಿರಾಗಿ ಉಳಿದಿದೆ. ತೆಂಗಿನ ಮರವನ್ನು ಬೇಕಾದ ಹಾಗೆ ಬಾಗಿಸುವ ವ್ಯವಸ್ಥೆಯಿದೆ. ಅವನ್ನು ತನ್ನ ಮನೆಕಡೆ ವಾಲಿಸದೆ, ಬೇರೆಕಡೆ, ಅಂದರೆ ಎರಡುಮನೆಗಳಿಗೂ ತೊಂದರೆಯಾಗದಂತೆ, ಬಾಗಿಸಪ್ಪ ಎಂದು ಅಮ್ಮ ಹೇಳಿದರೂ ಕಿಟ್ಟಣ್ಣನ ತಲೆಗೆ ಅದು ಹೋಗಲಿಲ್ಲ. ಗಾಳಿ ಹೊಡೆತಕ್ಕೆ ಮರದ ರೆಟ್ಟೆಗಳು ಕೆಳಗೆ ಬಿದ್ದು,  ನಮ್ಮ ಮನೆಯ ಸೂರಿನ ಹೆಂಚುಗಳೆಲ್ಲಾ ಚಪ್ಪಟೆಯಾಗುತ್ತಿದ್ದವು. ಮರದ ರೆಟ್ಟೆಗಳೂ ಭಾರಿ ಸೈಸಿನವು. ಭಾರಬೇರೆ.

ಮನೆ ರಿಪೇರಿ ಕೆಲಸದಲ್ಲಿ ಮೊದಲು  ದೇವರ ಗೂಡು, ಮುಚ್ಚಿ,  ಅದರ ಗೋಡೆಯನ್ನು ಸರಿಯಾಗಿ ಗಿಲಾವ್ ಮಾಡಿ, ಮಧ್ಯದಲ್ಲಿ ಸೂರಿಗೆ ಸಹಾಯವಾಗುವಂತೆ ಒಂದು ಕಂಬದ ಸಪೋರ್ಟ್ ಕೊಟ್ಟು ನಿಲ್ಲಿಸಿದರು. ದೊಡ್ಡ ಒರಳು ಒಲೆಯ ಪಕ್ಕದಲ್ಲೇ ಇತ್ತು ; ಅದು, ದೋಸೆಹಿಟ್ಟು ರುಬ್ಬುವಾಗ ಸ್ವಲ್ಪ ಕಷ್ಟವಾಯಿತು. ರುಬ್ಬುವ ವರಳಿಗೂ ಒಲೆಗೂ ಅಂತರ ತೀರ ಕಡಿಮೆ.  ಅದು ಸ್ವಲ್ಪ ಕಿರಿಕಿರಿಮಾಡುತ್ತಿತ್ತು. ಕಾಲಿನ ಮಣ್ಣಿನಭಾಗ ಒರಳಮೇಲೆ ಬೀಳುವ ಭಯ. ಯಾವಾಗಲೂ ಚೆನ್ನಾಗಿ ಕೈ, ಕಾಲುತೊಳೆದಿಕೊಂಡೇ ರುಬ್ಬಲು ಬರಬೇಕು.ಅಟ್ಟದ ಮೇಲೆ ಒಂದು ಕಗ್ಗತ್ತಲ ರೂಂ ಇತ್ತು. ಅದರಲ್ಲೇನಿದೆ ಎಂದು ಯಾರಿಗೂ ಗೊತ್ತಿರಲಿಲ್ಲ. ಹೆದರಿಕೆ ಒಳಗೆ ಹೋಗಲು ! ಅದು ಪ್ಪನ ರೀಊಂ ಕೆಳಗೆ ಇತ್ತು. ಅದಕ್ಕೆ ಒಂದು ಬೆಳಕಿನ ಕಿಂಡಿಮಾಡಿ ಅಲ್ಲಿ ಒಂದು ವಿಶೇಷ ಹೆಂಚನ್ನು ಹೊಂದಿಸಲಾಯಿತು. ಆದರೂ ಆಟ್ಟದ ನೆಲತುಂಬಾಹಾಳಾಗಿತ್ತು. ಮಣ್ಣು, ಬಳ್ಳಿಗಳನ್ನು ಸಮವಾಗಿ ಸೇರಿಸಿ ಮಾಡಿದ ನೆಲ. ಧೂಳು ಬಹಳವಾಗಿತ್ತು. ಅಲ್ಲಿನ ದೊಡ್ಡ ಮರದ ಪೆಟಾರ‍ಿಯ ತುಂಬಾ ಪುಸ್ತಕಗಳು ಇದ್ದವು. ನವರಾತ್ರಿಯಲ್ಲಿ ಕೂಡಿಸುವ ಕೆಲವು ಬೊಂಬೆಗಳಿದ್ದವು.

ಗೋಡೆಗೆ ಹೊಂದಿಸಿದಂತೆ ಸುಮಾರು ೮-೯ ಭಾರಿ ಸೈಜಿನ ವಾಡೇವುಗಳಿದ್ದವು. ಆವುಗಳ ಮೇಲ್ಭಾಗ ಮುಚ್ಚಿದ್ದರು. ಕೆಳಗೆ ಒಂದು ದಪ್ಪ ರಂದ್ರವಿತ್ತು. ಅದರ ಮುಚ್ಚಳವನ್ನು ತೆಗೆದು ಕಾಳುಗಳನ್ನು ಹೊರಗೆ  ಸುರುಯಬಹುದಾಗಿತ್ತು. ಆದರೆ ವಾಡೇವುಗಳನ್ನು ಬಳಸದೆ ಸುಮಾರು ವರ್ಷಗಳಾಗಿತ್ತು. ಅಮ್ಮನಿಗೂ ಅದರ ಬಳಸಿದ್ದರ ನೆನಪಿರಲಿಲ್ಲ. ಅಟ್ಟದ ಸೂರಿನ ಮುಟ್ಟುಗಳನ್ನು ವ್ಯವಸ್ಥಿತಗೊಳಿಸಿ ಹಳೆಯದನ್ನು ಬದಲಾಯಿಸಿ, ನೆಲದ ಮಣ್ಣನ್ನು ಕೆರೆದು ತೆಗೆದು ಹೊರಗೆ ಬಿಸಾಡಿದೆವು. ಅದರಿಂದ ಅಟ್ಟದ ಭಾರ ಕಡಿಮೆಯಾಯಿತು. ಆದರ ತೊಲೆಗಳ ಮಧ್ಯೆ ಸಂದು ಕಾಣಿಸುತ್ತಿತ್ತು. ಹಲಿಗೆಗಳಿರಲಿಲ್ಲ. ಮಧ್ಯೆ ಜಾಗವಿತ್ತು. ಮರದ ಏಣಿಯ ಜಾಗವನ್ನು ಸ್ವಲ್ಪ ಬದಲಾಯಿಸಿದೆವು. ನಡುಮನೆಯ ದೊಡ್ಡ ಬಾಗಿಲಿಗೆ ಅದು ತಗುಲುತ್ತಿತ್ತು. ಈಗ ಬಾಗಿಲು ಹಾಕಲು ತೆಗೆಯಲು ಅನುಕೂಲವಾಯಿತು. ಗಾಳಿಬಂದಾಗ ಸುಯ್ ಎನ್ನುವ ಅದರ ಶಬ್ದ ನಮ್ಮ ಸೂರಿನ ಚೆಂಚುಗಳ ಮೂಲಕ ಹಾಯ್ಡೂ ಃಹೋದಾಗ ಒಂದು ರೀತಿಯ ಶಬ್ದ ಬರುತ್ತಿತ್ತು. ನಮ್ಮ ಮನೆಯ ಒಳಗಡೆಯ ನೆಲ ಹೆಚ್ಚುಕಡಿಮೆ ಸಮಮಟ್ಟವಾಗಿಯೇ ಇತ್ತು. ಪಕ್ಕದ ಮನೆ ಕಕ್ಕ ಅವರ ಮನೆಯ ನೆಲವನ್ನು ಅಗಿದು, ತಿಗಣೆಗಳು ಬರದಂತೆ ಕಂದಕವನ್ನು ಸುತ್ತಲೂ ನಿರ್ಮಾಣಮಾಡಿದ್ದರು. ಹಾಗಾಗಿ ಗುಂಡಿಗಳು ಹೆಚ್ಚಾಗಿದ್ದವು. ನಮ್ಮಮನೆಯಲ್ಲಿ ಅದಿರಲಿಲ್ಲ. ಹಾಗಂತ ತಿಗಣೆಗಳಿರಲಿಲ್ಲ ಅಂತಲ್ಲ. ಈಚಲು ಚಾಪೆಯೊಳಗೆ ಅದೆಷ್ಟು ತಿಗಣೆಗಳು ನೆಮ್ಮದಿಪಡೆಯುತ್ತಿದ್ದವೋ ಹೇಳುವುದು ಕಠಿಣ. ಈ ಮಧ್ಯೆ, ಒಟ್ಟಿನಲ್ಲಿ ನಮ್ಮ ಹಳೆಯ ಮನೆ ಹೊಸ ಭದ್ರವಾದ ಮರಮುಟ್ಟುಗಳನ್ನು ಪಡೆದು ಸಧೃಢವಾಯಿತು. ಅದೇ ಮನೆ ಹೆಚ್ಚೇನೂ ವ್ಯತ್ಯಾಸವಿರಲಿಲ್ಲ.

ಆಮೇಲೆ ನಾಗರಾಜ, ಸೊಸೈಟಿ ಕೆಲಸಕ್ಕೆ ಸೇರಿದಸಮಯದಲ್ಲಿ ಮನೆಯ ರೂಪಪರಿವರ್ತನೆಯಾಯಿತು. ಮುಂದೆ ನಮ್ಮ ಅಣ್ಣ ರಾಮಕೃಷ್ಣ ಹೊಳಲ್ಕೆರೆಗೆ ಪೋಸ್ಟ್ ಮಾಸ್ಟರ್ ಆಗಿ ಬಂದಾಗ ನಾವು 'ಪೋಸ್ಟ್ ಆಫೀಸ್ ಕ್ವಾರ್ಟರ್ಸ್ 'ಗೆ ವಾಸಮಾಡಲು ಹೋದೆವು. ಕೋಟೆ ಮನೆ ಬಾಗಿಲು ಬೀಗ ಹಾಕಿತ್ತು, ಸುಮಾರು ೨ ವರ್ಷಗಳ ಕಾಲ. ನಾನು ಮೊದಲವರ್ಷ ಡಿಪ್ಲೊಮಾದಲ್ಲಿ ಅನುತ್ತೀರ್ಣನಾಗಿ ಹೊಳಲ್ಕೆರೆಯಲ್ಲೇ ಇದ್ದೆ. (೧೯೬೨)  ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಕುಳಿತು ಪಾಸ್ ಆದೆ. 'ಸೂರಪ್ಪ 'ನವರೆಂಬ ಪೋಸ್ಟ್ ಕ್ಲರ್ಕ್ ನಮಗೆ ಪರಿಚಿತರು. ಅವರು ನನಗೆ ಸ್ನೇಹಿತರಾಗಿದ್ದರು. ಮನೆಗೆ ಆಗಾಗ ಬರೊರು.ರಾಮಕೃಷ್ಣ  ಅಣ್ಣಮಾತ್ರ ಬಹಳ ಸ್ಟ್ರಿಕ್ಟ್. ಆಗಿದ್ದರು. ನಾವು ಎಂದೂ ಆಫೀಸ್ ಸಮಯದಲ್ಲಿ ಒಳಗೆ ಹೋದವರಲ್ಲ. ಊಟದಸಮಯ, ತಿಂಡಿಸಮಯದಲ್ಲಿ ಬಾಗಿಲು ಸದ್ದುಮಾಡಿದರೆ ಸಾಕುಅವನೇ ಬಂದು ಕೆಲಸಮುಗಿಸಿ ವಾಪಸ್ ಹೋಗುತ್ತಿದ್ದನು
.
ಚಿದಂಬರಪ್ಪನವರು ೪ ಚಕ್ರದ ಗಾಡಿಯಲ್ಲಿ ನೀರು ತುಂಬಿದ ಬಿಂದಿಗೆಗಳನ್ನು ಇಟ್ಟುಕೊಂಡು ವರ್ತನೆಮನೆಗೆ ನೀರು ಸರಬರಾಜು ಮಾಡುತ್ತಿದ್ದರು. ಮಕ್ಕಳಿಗೆ ಪಾಠ ಹೇಳಿಕೊಟ್ಟು ಹಣ ಗಳಿಸುತ್ತಿದ್ದರು. ತಮ್ಮ ಮಕ್ಕಳನ್ನು ಓದಿಸುವುದು ಸಂಸಾರ ನಿರ್ವಹಣೆ ಇದರಲ್ಲೇ ಆಗಬೇಕಿತ್ತು. ವಾಸಣ್ಣ ಹನುಮಂತಾಚಾರ್ ರ ಮಗ. ಕನ್ನಿಕಾಪರಮೇಶ್ವರಿ ಗುಡಿಯಲ್ಲಿ ಅರ್ಚಕ. ಶೆಟ್ಟರಿಗೆಲ್ಲಾ ಅಚ್ಚುಮೆಚ್ಚು. ಮನೆಗಳಿಗೆ ಪೇಪರ್ ಹಾಗಿಬರುತ್ತಿದ್ದ.

ಶಿವಮೂರ್ತಿ ದರ್ಜಿಯವರ ಮನೆಯವನು. ಅವನು ಕ್ರಿಕೆಟ್ ಪ್ರೇಮಿ. ಮನೆಯಲ್ಲಿ ದಪ್ಪನೆಯ ಮ್ಯಾಟ್ ಇತ್ತು. ವಿಕೆಟ್ ಮತ್ತು ಬಾಲ್ ನ್ನೂ ಇಟ್ಟುಕೊಂಡಿದ್ದ. ಹೈಸ್ಕೂಲ್ ಮೈದಾನದಲ್ಲಿ ಕ್ರಿಕೆಟ್ ಆಟ ಆಡುತ್ತಿದ್ದರು. ಆ ಸಮಯದಲ್ಲಿ ರಾ ಕೂಡ ಅದರಲ್ಲಿ ಸೇರಿಕೊಳ್ಳುತ್ತಿದ್ದ. ಬಾಬಣ್ಣ,  ಛಾಯಪ್ಪನವರ ಮಗ. ಅವನು ಸ್ವಲ್ಪ ಕಾಲ ಮಲ್ಲಾಡಿಹಳ್ಳಿ ವ್ಯಾಯಾಮಮೇಸ್ಟ್ರ ಆಶ್ರಮದಲ್ಲಿ ತರಪೇತಿ ಪಡೆಯುತ್ತಿದ್ದ. ಆಮೇಲೆ ಆಡನೂರಿನಲ್ಲಿ ಮೇಸ್ಟ್ರ ಕೆಲಸ ಸಿಕ್ಕಿತು. ಅಲ್ಲಿ ಚಿಕ್ಕ ತನ್ನದೇ ಆದ ಆಶ್ರಮವನ್ನು ಮಾಡಿಕೊಂಡು ಇದ್ದಾನೆಂದು ವರದಿ. ರಾಮಕೃಷ್ಣ ನಮ್ಮ ಜೊತೆ ಆಟ ಆಡುತ್ತಿದ್ದ. ಅವನು ಮಲ್ಲ ಹೋಗಿ ಅಲ್ಲೇ ಇದ್ದನು .ಸ್ವಾಮಿಗಳ ಜೊತೆ ಮನಸ್ತಾಪ ಮಾಡಿಕೊಂಡನೆಂಬ ಸುದ್ದಿ. ಚಿಕ್ಕರೂಪಿಯಾಗಿದ್ದವನು ಈಗೆ ಅಷ್ಟು ಎತ್ತರಕ್ಕೆ ಬೆಳೆದಿದ್ದಾನೆ. ಗುರುತು ಸಿಗದಶ್ಟು. ರಂಗಣ್ಣ ಪೋಸ್ಟ್ ಮ್ಯಾನ್ ಆಗಿದ್ದ. ಈಗ ಏನಾದರೂ ಬಡ್ತಿ ಸಿಕ್ಕಿಮುಂದೆ ಬಂದಿರಬಹುದು.

ಸೇತಣ್ಣನ ಮಕ್ಕಳಲ್ಲಿ ಪಂಕಜ ಹಿರಿಯವಳು, ನಮ್ಮ ನಾಗರಾಜನ ಜೊತೆ ಇರಬಹುದು. ವಾರಿಜ, ಚಿಕ್ಕವಳು, ನಟಿ ಚಂದ್ರನ ಜೊತೆ, ಜಮದಗ್ನಿ ಗೋಪಿ, ದೊಡ್ಡವನು, ಶರ್ಮಣ್ಣ ರಾಮ ಜೊತೆಯವನು. ಆತ ಹೊಳಲ್ಕೆರೆಯಲ್ಲೇ ಡಾ. ಆಗಿದ್ದರು. ಈಗ ಬೆಂಗಳೂರಿನಲ್ಲಿ ಇದ್ದಾರೆ. ಕೃಷ್ಣ ಶೆಟ್ಟಿಯ ಮಗ ವಿಜಯ ಶೆಟ್ಟಿ ನನ್ನ ವಾರಿಗೆಯವ. ಅವನು ಬೆಂಗಳೂರಿಗೆ ಹೋದ. ಅಲ್ಲೇ ವ್ಯಾಪಾರ ಮಾಡುತ್ತಿರಬಹುದು. ನಾರಾಯಣರಾಯರ ಮಗ ವಸಂತ ಚಂದ್ರನ ಜೊತೆಯವನು. ಆಗಾಗ ಹೊಳಲ್ಕೆರೆಯಲ್ಲಿ ಸಿಗುತ್ತಾನೆ. ಕಿಟ್ಟಣ್ಣನ ಮಕ್ಕಳು ಚಿಕ್ಕವರು. ನಮಗೆ ಪರಿಚಯವಿಲ್ಲ.

'ನಮ್ಮ ಅಪ್ಪವರ ಬಗ್ಗೆ :

ಅವರಿಗೆ ಕಣ್ಣು ಸ್ವಲ್ಪ ತೊಂದರೆ ಕೊಟ್ಟಿತ್ತು. ರಸ್ತೆಯಲ್ಲಿ ನಡೆಯುವಾಗ ಸುಳಿವಿನ ಮೇಲೆ ರಸ್ತೆಯ ಒಂದೇ ಪಕ್ಕದಲ್ಲಿ ಹೋಗುತ್ತಿದ್ದರು. ನಾವ್ಯಾರಾದರೂ ಅವರ ಬದಿಯಲ್ಲಿ ಹೋದರೂ ಅವರಿಗೆ ಸುಳಿವು ಗೊತ್ತಾಗುತ್ತಿರಲಿಲ್ಲ ಎನ್ನುವುದು ನನ್ನ ಅನಿಸಿಕೆ. ಹಲ್ಲುಬ್ಬಿತ್ತು. ಹಣೆಗೆ ಸಾದಿಟ್ಟುಕೊಳ್ಳುತ್ತಿದ್ದರು. ಆಗ ಮನೆಯಲ್ಲಿ ಸಾದಿನ ಒಂದು ಚಿಕ್ಕ ಲೋಟ ಇರುತ್ತಿತ್ತು,. ಬರಿಹಣೆಯಲ್ಲಿ ಇರುವುದು ಸಮ್ಮತವಿರಲಿಲ್ಲ. ಕುಂಕುಮ ಇಲ್ಲವೆ ಸಾದು ಬೇಕೇ ಬೇಕು. ಅದರಲ್ಲೂ ಊಟಕ್ಕೆ ಕೂಡುವ ಮೊದಲು. 

ವಾರದಲ್ಲಿ ಎರಡು ದಿನ ನಾರಾಯಣಪ್ಪ ಮನೆ ಕ್ಷೌರಿಕ ಬರುತ್ತಿದ್ದ. ಮಂಗಳವಾರ ಶನಿವಾರ ಇಲ್ಲ. ಏಕಾದಶಿ, ಮುಂತಾದ ದಿನಗಳು ಬಂದರೆ ಅವನು ಕೇಳಿಕೊಂಡು ವಾಪಸ್ ಹೋಗುತ್ತಿದ್ದ. ಹಿತ್ತಲಿನಲ್ಲಿ ನೆಲದ ಮೇಲೆ ಚಾಪೆಹಾಕಿಕೊಂಡು ಕುಳಿತುಕೊಳ್ಳುತ್ತಿದ್ದೆವು. ನಂತರ ಅಮ್ಮ ಬಿಸಿನೀರು ತಲೆಯಮೇಲೆ ಸುರಿಯುತ್ತಿದ್ದರು. ಬಟ್ಟೆಗಳನ್ನು ನೆನೆಸಿದಮೇಲೆ. 

ಮೊದಲೇ ತಿಳಿಸಿದಂತೆ ಅವರು ಬೆಳ್ಳಿತಟ್ಟೆಯಲ್ಲಿ ಊಟಮಾಡುತ್ತಿದ್ದರು. ಅವರ ಊಟದ ಬಳಿಕ ಅಮ್ಮ ಅದೇ ತಟ್ಟೆಯಲ್ಲೇ ಊಟಮಾಡುತ್ತಿದ್ದಳು. ಅವಳಿಗೆ ಪತಿಧರ್ಮ ಪಾಲಿಸಿದ ತೃಪ್ತಿ ಸಿಗುತ್ತಿತ್ತು. ಅಪ್ಪ ಯಾವಾಗಲಾದರು ತೊಳೆದ ಮೇಲೆ ಮಾಡು ಎಂದು ಹೇಳಿದಂತೆ ತೋರಲಿಲ್ಲ. ಅಥವಾ ಅದರ ಬಗ್ಗೆ ಮೊದಲೇ ಮಾತಾಗಿರಲೂ ಸಾಕು. ನಾವ್ಯಾರೂ ಅದರ ಬಗ್ಗೆ ಮಾತುಕತೆ ಆಡಿದ್ದು ನನಗೆ ನೆನಪಿಲ್ಲ
.
ಮನೆಯಲ್ಲಿ ಎಲ್ಲರಿಗೂ ತಲೆನೋವು. ಅಮೃತಾಂಜನ ಇರಲೇ ಬೇಕು. ಅಪ್ಪ ಒಂದು ಕಶಾಯವನ್ನು ಮಾಡಿಸಿಕೊಂಡು ಕುಡಿಯುತ್ತಿದ್ದರು. ಅದು ನಿವಾರಣೆಗೆ. ಸೋನಾಪುಡಿ. ನ್ಯಶ್ಯ ಹಾಕುವ ಅಭ್ಯಾಸ ಮಾತ್ರ ಇತ್ತು. ಅದು ಪಂಚೆಯ ಒಂದು ಭಾಗದಲ್ಲಿ ಪುಡಿ ಬಿದ್ದಿರೋದು. ಒಗೆಯೊವಾಗ ಸೋಪಿನಲ್ಲಿ ಜಾಲಿಸಿದರೆ ಹೋಗುತ್ತಿತ್ತು. ಬೇರೆ ಯಾವ ಅಭ್ಯಾಸವೂ ಇರಲಿಲ್ಲ. ತುಪ್ಪವಿಲ್ಲದೆ ಊಟ ಮಾಡುತ್ತಿರಲಿಲ್ಲ. ಸಾಲಮಾಡಿಯಾದರೂ ತುಪ್ಪ ತಿನ್ನಬೇಕೆಂದು ನಗುತ್ತಾ ಹೇಳುತ್ತಿದ್ದರು.

ವರಮಾನ ತೀರ ಕಡಿಮೆ. ಅವರ ಉಳಿತಾಯದ ಹಣದಿಂದ ಮನೆ ನಡೆಯುತ್ತಿತ್ತು. ಜಮೀನು ಮಾರಿದ ಹಣವನ್ನು ಪೊಸ್ಟ್ ಆಫೀಸ್ ನಲ್ಲಿಟ್ಟು ಅದರ ಬಡ್ಡಿಯಲ್ಲಿ ಜೀವನ.

ಅಪ್ಪ ಸತ್ತಮೇಲೆ ಒಂದು ವರ್ಷದ ನಂತರ ನಾಗರಾಜ ಮನೆಯನ್ನು ದುರಸ್ತಿಮಾಡುವ ಕೆಲಸ ಕೈಗೆತ್ತಿಕೊಂಡ. ಆಸಮಯದಲ್ಲಿ ಸಿಕ್ಕ ಸಿಮೆಂಟ್ ಕೆಲಸದವನು ನಮ್ಮ ಮನೆ ದಾಸಯ್ಯ ಉರ್ಫ್ ದಾಸಯ್ಯ. ಕೆಲಸ ಚೆನ್ನಾಗಿ ಕಲಿತುಕೊಂಡುಬಂದಿದ್ದ. ಮನೆಯ ಎಲ್ಲಾ ರೂಂಗಳಲ್ಲೂ ಕೆಂಪು ಸಿಮೆಂಟ್ ಮಾಡಿಕೊಟ್ಟ. ಗೋಡೆಗಳಿಗೂ ಮೇಜ್ ಕಟ್ ವಜ್ರಪ್ಪ, ಎಲೆಕ್ ಟ್ರಿಕ್ ವೈರಿಂಗ್ ಮಾಡಿಕೊಟ್ಟರು. ಬ್ರಹ್ಮಪ್ಪನವರು ಬಂದು ಮಾಡಿಕೊಟ್ಟರು. ಚಿತ್ರದುರ್ಗದಿಂದ ಶ್ರೀರಾಮಾ ರೇಡಿಯೊ ಕಂ,  ಫಿಲಿಪ್ಸ್ ರೇಡಿಯೋ ತಂದ. ಅದು ಚಿಕ್ಕದಾಗಿತ್ತು. ಅದರ ಶಬ್ದ, ನಾರಪ್ಪನ ಮನೆಯ ಬಳಿಯ ನಲ್ಲಿಯವರೆಗೆ ಕೇಳಿಸುತ್ತಿತ್ತು. ನಲ್ಲಿಯ ಹುಡುಗರು ಹೆಂಗಸರು, ಆ...ನಾಗರಾಜಣ್ಣಾರ ರೇಡಿಯೋ ಸುರುಆತ್ನೋಡು ಅನ್ನೊರು. ನಮಗೆ ಕಾರ್ಯಕ್ರಮಗಳೆಲ್ಲಾ ತುಂಬಾ ಇಷ್ಟ.ಅಮ್ಮನಿಗಂತೂ ಇಷ್ಟು ಚಿಕ್ಕಪೆಟ್ಟಿಗೆಯಲ್ಲಿ ಆ ಸೆಖೆಯಲ್ಲಿ ಅವರೆಲ್ಲಾ ಪಾಪ ಹೇಗೆ ಕುಳಿತು ಹಾಡುತ್ತಾರೊ ಎಂದು ಮರುಕಪಡೊಳು ! ವಾರದ ಪಕ್ಶಿನೋಟ, ರಾತ್ರಿನಾಟಕಗಳು, ಚುಟಕ, ಬೆಳಗಿನ ಸುಭಾಷಿತಗಳು,  ರಾಜರತ್ನಂ ಹಿತವಚನಗಳು. ಇತ್ಯಾದಿ, ರೇಡಿಯೋ ಕ್ರಿಕೆಟ್ ಕಾಮೆಂಟರಿ, ರೇಡಿಯೊ ಸಿಲೊನ್ ನಲ್ಲಿ ಪ್ರತಿ ಬುಧವಾರ ಪ್ರಸಾರವಾಗುತ್ತಿದ್ದ, ಅಮೀನ್ ಸಯಾನಿಯವರ "ಬಿನಾಕ ಗೀತ್ ಮಾಲ" ಕಾರ್ಯಕ್ರಮ. ಎಚ್. ಆರ್. ಲೀಲಾವತಿಯವರ,' ವಾರದ ಹೊಸಹಾಡು,'  'ಪುಟ್ಟಮಕ್ಕಳ ಕಾರ್ಯಕ್ರಮ,' 'ವನಿತಾವಿಹಾರ,' 'ರೇಡಿಯೊ ನಾಟಕಗಳು,' 'ಭಾಶಣಗಳು' ಇತ್ಯಾದಿ,

ಏಳುಕೋಟಿರಾಯರು ನಮ್ಮಮನೆಯ ಬಳಿಯ ಮನೆಗೆ ಬಾಡಿಗೆ ಗೆ ಬಂದರು. ರಾಮಣ್ಣ ಅವರಿಗೆ ನೀರಿನ ಸಹಾಯಮಾಡಿ ಹಿಂದಿ ಭಾಷೆಯನ್ನು ಕಲಿತನು. ಮುಂದೆ ಹಿಂದಿ ಪಂಡಿತ್ ಕೆಲಸವೂ ದೊರೆಯಿತು. ಹೈಸ್ಕೂಲಿನ ಮೇಸ್ಟ್ರುಗಳು, ಅನಂತರಾಮಯ್ಯ, ಸುಬ್ಬರಾಯರು, ಎನ್. ಡಿ. ಕೃಷ್ಣನ್, ನರಸಿಂಹಶಾಸ್ತ್ರಿಗಳು, ತರೀನ್, ಸೀತಾರಾಮಯ್ಯನವರು, ಸಚ್ಚಿದಾನಂದ ಮೂರ್ತಿ, ಎಚ್. ಎಸ್. ರಾಮಚಂದ್ರರಾವ್, ಎಲ್ಲರೂ ಒಳ್ಳೆಯ ಮೇಸ್ಟ್ರುಗಳೇ.

No comments:

Post a Comment