Monday, May 3, 2010

"ನನ್ನ ಹೊಸ ಚಪ್ಪಲಿ ಕಥೆ "

ಹೊಳಲ್ಕೆರೆಯಲ್ಲಿ ಹೆಚ್ಚಿನ ಜನರು, ಬರಿಗಾಲಿನಲ್ಲಿ ಓಡಾಡಲು ಆಸೆಪಡುತ್ತಿದ್ದರು. ರಸ್ತೆಗಳಲ್ಲಿ ಸಗಣಿ, ಕೆಸರು ಮಾತ್ರ ಇರುತ್ತಿತ್ತು. ಚಪ್ಪಲಿ ಉಪಯೋಗಿಸಿದರೆ, ಮುಜಗರ ಹೆಚ್ಚೇ ವಿನಃ ಕಡಿಮೆಯಾಗಿತ್ತಿರಲಿಲ್ಲ. ಗಾಜು, ಮುಳ್ಳು, ಮೊಳೆ, ತರಹದ ತ್ಯಾಜ್ಯವಸ್ತುಗಳಿಲ್ಲದೆ ಇದ್ದದ್ದರಿಂದ  ಆಗ,  ಚಪ್ಪಲಿಯಿಲ್ಲದೆಯೇ ನಾವು ಸಲೀಸಾಗಿ ಊರೆಲ್ಲಾ ಸುತ್ತಬಹುದಿತ್ತು.
ನಾನು ಹೈಸ್ಕೂಲಿಗೆ ಹೋಗುವಾಗ ಮಾತ್ರ ಚಪ್ಪಲಿಯ ಉಪಯೋಗ ಮಾಡಲೇ ಬೇಕಾಯಿತು. ಅಲ್ಲೂ ಕೆಲವರು,ದಿಡೀರನೆ ಚಪ್ಪಲಿಯಿಲ್ಲದೆ ಸ್ಕೂಲಿಗೆ ಬರುತ್ತಿದ್ದರು. ಯಾಕೊ ಅಲ್ಲಿನ ಟೀಚರ್ ಗಳು ತಲೆಯಮೇಲೆ ಟೋಪಿ ಹಾಕಿಕೊಂಡು ಬರುವುದರ ಬಗೆಗೆ ತುಂಬಾ ತಲೆಕೆಡೆಸಿಕೊಳ್ಳುತ್ತಿದ್ದರು. ಕಾಲಿಗೆ ಶೂ ಚಪ್ಪಲಿ ಯಿಲ್ಲದೆ ಬಂದರೂ ಸರಿ. ಯಾರನ್ನೂ ವಿಚಾರಿಸುತ್ತಿರಲಿಲ್ಲ. ನಾವುಗಳು ಮಿಡಲ್ ಸ್ಕೂಲ್ ನ ವರೆಗೆ ನಿಕ್ಕರ್ ಉಪಯೋಗಿಸುತ್ತಿದ್ದವರು, ಈಗ ಬಿಳಿ ಪೈಜಾಮ ಹಾಕಿಕೊಂಡು ಚಪ್ಪಲಿಹಾಕಿಕೊಂಡು ಹೊಗುತ್ತಿದ್ದೆವು.’ ಪ್ಯಾಂಟ್  ’ಇತ್ಯಾದಿ ನಮ್ಮ ಊರಿನವರಿಗೆ ತಿಳಿದು.

ಒಂದು ದಿನ ಶಾಲೆ ಆರಂಭವಾಗುವ ಮೊದಲು, ಅಪ್ಪ ನಮ್ಮನ್ನು ಕರೆದುಕೊಂಡು ಹೋಗಿ "ಗಣು ಅಂಗಡಿ"ಯಲ್ಲಿ ಬಟ್ಟೆ ಖರೀದಿಸಿ, ಅದನ್ನು ಹೊಲೆಯಲೂ ಅಲ್ಲೇ ಏರ್ಪಾಡುಮಾಡಿದ್ದರು. "ನಾಳೆ ನಾನು ಅಲ್ಲೆ ಸೊಸೈಟಿನಲ್ಲಿ ಕೂತಿರ್ತೀನಿ ಇಬೃ ಬನ್ನಿ ಚಪ್ಲಿ ಕೊಡಿಸ್ತೀನಿ "ಅಂದೃ. ನನಗೋ ಪರಮ ಸಂತೋಷ. ಅಮ್ಮ "ಚಂದ್ರ ಇನ್ನೂ ಚಿಕ್ಕೊನು ಕಣೊ ಅವನ್ಯಾಕ್ ಆ ದಪ್ಪನೆ ಚಪ್ಲಿ ಮೆಟ್ಟಿ ಒದ್ದಾಡಬೇಕು "; "ನೀನೊಬ್ನೆ ಹೋಗು ಸಾಕು" ಅಂದೃ. ನಾನು ಬೇಗ  ಬೆಳಿಗ್ಯೆ ಎದ್ದು  ಸ್ನಾನಮಾಡಿ ದೇವರಿಗೆ ಕೈಮುಗಿದು, ಅಮ್ಮನಿಗೆ ಹೇಳಿ, ಸೊಸೈಟಿಗೆ ಚಪಲಿ ತರಲು ಹೋದೆ. ಅಪ್ಪ,  ಆಗತಾನೆ ಮಾರಲು ಬಂದಿದ್ದ ಸೇಲಂ ನ ದಪ್ಪ ಚರ್ಮದ ಮಿರಿ-ಮಿರಿ ಮಿಂಚುತ್ತಿದ್ದ ಚಪ್ಪಲಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದ ಜಾಗಕ್ಕೆ ಹೋಗಿ ನೋಡಲು ಹೇಳಿದರು. "ಇವು ಭಾಳದಿನ ಬಾಳ್ಕೆ ಬರತ್ವೆ. ಎಂಕ್ಟೇಶಣ್ಣ,  ಇವನ್ನೆ ತಗ", ಎಂದು ನಮ್ಮ ಸೊಸೈಟಿಯ ಜವಾನ "ನೂರ್" ತಮ್ಮ ಸಲಹೆ ಕೊಟ್ಟಿದ್ದ. ನಾನು ಕಪ್ಪುಬಣ್ಣದ ಸೇಲಂಚಪ್ಪಲಿಯನ್ನು ಅದರ ಬಾಕ್ಸ್ ನಿಂದ ಹೊರಗೆ ತೆಗೆದು ಕಾಲಿನಲ್ಲಿ ಮೆಟ್ಟಿ, ಸರಿಯಾಗಿದೆಯೆಂದು ಖಚಿತಪಡಿಸಿಕೊಂಡು, ಅಪ್ಪನಿಗೆ ಹೇಳಿ ಸೊಸೈಟಿಯ ಹೊರಗೆ ಬಂದೆ.

ಹೊಸಚಪ್ಪಲಿ  ಹಾಕಿಕೊಂಡು, "ನಮ್ಮ ಊರಿನ ಪ್ರಮುಖರಸ್ತೆಯಾದ ತಾಲ್ಲೂಕ್ ಕಛೇರಿ ರಸ್ತೆ"ಯಲ್ಲಿ ಠೀವಿಯಿಂದ "ಟಪ್ ಟಪ್ ಶಬ್ದ " ಮಾಡಿಕೊಂಡು ನೆಡೆದು ಬರುವಾಗ, ಬದಿಯ ಮರದ ಕೆಳಗೆ ಕುಳಿತಿದ್ದ ಚಪ್ಪಲಿ ರಿಪೇರಿಯವ ನನ್ನನ್ನು ಕರೆದ. "ಸೋಮಿಯೊರು ಏನ್ ಒಸ ಚಪ್ಲಿ ಆಕ್ಕಂಡ್ ಬಂದಿರೊ ಅಂಗೈತೆ." " ಇಂತ ಒಳ್ಳೆ ಎಕ್ಡಗಳನ್ನು ಅಂಗೇ ಸವಸಕ್ಕೆ ಬಿಡ್ಬ್ಯಾಡಿ. ಗೊತ್ತಾತ."  "ಅಟ್ಟೆಕಟ್ಸಿ ಅಯ್ಯಾ". ಅನ್ನೊದೆ. ನನಗೆ ಸ್ವಲ್ಪ ಹೊತ್ತು ಗೊತ್ತಾಗ್ಲಿಲ್ಲ. ಆಮೇಲಿ ಯೋಚ್ನೆ ಮಾಡಿ ಅವ್ನ ಹೇಳೊದ್ ಸರಿ ಅಲ್ವ. ಆದ್ರೆ ನನ್ನ ಬಳಿ ಹ ಣ ಇಲ್ಲ ಏನ್ಮಾಡೊದು. ಆಗ ಅವನು ಹೇಳ್ದ ." ಅಯ್ಯೊ ಸೊಮೆರ, ಅಣ ಎಲ್ ಓಯ್ತದೆ. ಮೊದ್ಲು ಚಪ್ಲಿ ಆಳಾಗದನ್ನು ಉಳ್ಸಿ. ಆಮೇಲ್ ದುಡ್ಡು ಕೊಡೊರಂತೆ. ಅಷ್ಟಕ್ಕು ರಂಗಪ್ನೊರಲ್ವ ನಿಮ್ಮಪ್ಪರು. ನನಗೆ ಅವರ ಪರಿಚಯ ಐತೆ. ಈ ದಾರಿನಾಗೆ ಅವೃ ಸೊಸಟಿ ಬಿಟ್ಮೇಲ್ ಓಗ್ವಾದು. ನಾನೆ ಅವರ್ ತಾವ್ ಇಸ್ಕೊಡ್ರೂ ನಡಿತದೆ". ಅಂದ. ನಾನು ಅವನ ಮುಂದೆ ಚಪ್ಪಲಿ ಬಿಟ್ಟು ನಿಂತೆ. ಅವನು ದಪ್ಪದ ಟೈರ್ ರಬ್ಬರ್ ನ ಕತ್ರಿಸಿ, ಮಟ್ಟಸವಾಗಿ ಮೆಟ್ಟಿನ್ ಕೆಳ್ಗೆ ಹೊಂದಿಸಿ ಮೊಳೆ ಹೊಡ್ದು ಆಮೇಲೆ ಗಟ್ಟಿದಾರ್ದಲ್ಲಿ ಹೊಲ್ದ. ಜೋರಾಗಿ ಉಂಗುಶ್ಟನ ಎಳ್ದು ಈಗ್ ಏಳಿ ಯಾರಾದೃ ಈ ಚಪ್ಲಿನ ಅರ್ಯಕ್ಕಾಗ್ತದ ಎಂಗೆ ಅಂತ. ನಾನು ಅವನಿಗೆ ಧನ್ಯವಾದ ತಿಳ್ಸಿ, " ಸ್ವಲ್ಪ ಇರಪ್ಪ. ನಾನು ಸೊಸೈಟಿ ಹತ್ರ ನಮ್ಮಪ್ಪಾರು ಇದಾರೆ."  " ನಮ್ಮಣ್ಣನು ಅಲ್ಲೆ ಕೆಲ್ಸ ಮಾಡೊದು. ಹಣ ಇಸ್ಕೊಂಡ್ ಬಂದ್ಬಿಡ್ತಿನಿ. ನಿನಗ್ಯಾಕ್ ಕಾಯೊ ಬೇಸರ. ತಿಳಿತ ಇಲ್ಲೆ ಇರು." "ಅಯ್ಯೊ ನೀವೋಗಿ ಬುದ್ದಿ ; ನಾನಿಲ್  ಕೂರ್ದೆ ಇನ್ನೆಲ್ ಗೋಗ್ಲಿ" ಅಂದ ಚಪ್ಪಲಿ ರಿಪೇರಿಯವ.

ನಾನು ಹೋದಾಗ, ಅಪ್ಪ ಸೊಸೈಟಿಲಿ ಇರ್ಲಿಲ್ಲ. ನಾಗಣ್ಣ ಇದ್ದ. ನಾನು ನನ್ನ ಬುದ್ಧಿವಂತಿಕೆಯ ವಿವರಣೆ ಕೊಡಲು, ಶುರುಮಾಡಿದೆ. ಬಹುಶಃ ನಾಗಣ್ಣನ ಬಳಿ ನನ್ನದೇ ಆದ ವಿಚಾರಧಾರೆಯನ್ನು ವಿವರಿಸಿ ಹೇಳುವ ನನ್ನ ಬಾಲ್ಯಜೀವನದ ಮೊಟ್ಟಮೊದಲ ಪ್ರಸಂಗ ಅದೇ ಆಗಿತ್ತು. ನಾಗಣ್ಣ,  ಬೇಜಾರಿನ ದ್ವನಿಯಲ್ಲಿ, " ಅಯ್ಯೊನಿನ್ನ ಇದೆಂತ ಅಟ್ಟೆನೊ ಇದನ್ ಹಾಕ್ಕೊಂಡ್ ನಡ್ಯಕ್ಕಗತ್ತಾ ನಿನ್ಗೆ." " ಎಷ್ಟ್ ಭಾರ ಇದ್ಯಲ್ಲೊ. ಇವ್ನ.  ಯಾವ್ದಕ್ಕು ಅಮ್ಮನ್ನೊ ನನ್ನೊ ಕೇಳೊದೇ ಬ್ಯಾಡ್ವೆ. ಮೊದ್ಲ್ ಹೋಗಿ ಅದ್ಯಾವೊನ್ ಅಟ್ಟೆ ಹಚ್ಚಿದಾನೊ ಅವ್ನಗೆ ಹೇಳಿ ಅದನ್ನು ತೆಗ್ಸು". "ನಾನ್ ನೋಡ್ಕೊ ತೀನವ್ನ" . "ಭಾರಿ ಭಾರ ಕಣೋ ಅದೆಲ್ಲ ತೋಟ ತುಡ್ಗೆ, ಹೊಲ ಅಲ್ಲಿ ಕೆಲ್ಸಮಾಡೊರ್ಗೆ. ನೀನು ಸ್ಕೂಲ್ ಗೆ ಹೋಗ್ತಿ ಮನೆಗೆ ಬರ್ತಿ" . "ಮತ್ತೆಲ್ಲಿಗೆ ಹೊಗ್ತಿ." ಮೊದ್ಲ್ ನಾನ್ ಹೇಳ್ದಂಗ್ ಮಾಡು. ಒಳ್ಳೆ ಬೆಪ್ಪು ತಕಡಿ ಕಣೊ ನಿನು. ಅವ್ನ್ ಹೇಳ್ದ ನೀನ್ ಕೇಳ್ದೆ. ಸರಿಹೋಯ್ತು ನಿಮ್ಮಿಬ್ರಿಗು".

ನಾನು ನಮ್ಮಣ್ಣ ಹೇಳಿದ್ ತರ್ಹ, ಚಪ್ಪಲಿಹೊಲಿಯೋನ್ಮುಂದೆ ಗುಸುಗುಟ್ಟಿದಾಗ ಅವನಿಗೇನು ತಿಳಿಯಲಿಲ್ಲ. " ಏನ್ ಸೋಮಿ ನಿಮ್ಗೇನೊ ಒಳ್ಳೇ ವಿಸ್ಯ ಏಳಿದ್ರೆ, ಅದು ನಿಮ್ ತಲಿ ಒಳ್ಗೆ ಓಗಂಗೇ ಇಲ್ಲ ; ನನ್ನ ಕೆಲ್ಸ ಎಲ್ಲ ಬೆಲೆಇಲ್ದೆ ಓತು." ಅವನ್ ಹತ್ರ ಬೈಸ್ಕೊಂಡು, ಸಪ್ಮುಖ ಹಾಕ್ಕೊಂಡು  ಮನೆಗೆ ವಾಪಸ್ ಬಂದೆ. "ಅಯ್ಯೊ ಹೊಸಚಪ್ಲಿ ತಗೊಂಡ್ ಸಂತೋಷ ಪಡೊದ್ ಬಿಟ್ಟು, ಇದ್ಯಾಕ್ ಅಳು-ಮುಖ ಮಾಡ್ಕೊಂಡಿದಾನ್ ಇವ್ನು." ಅಂದೃ ನಮ್ಮಮ್ಮ. ಅವ್ರಿಗೆಲ್ಲಿದೆ ಸಮಯ ಅವ್ನ್ ಚಪ್ಪಲಿ ನೋಡೊಕೆ ! ನನಗೆ ಆ ಹೊತ್ನಲ್ಲಿ  ಏನ್ಮಾಡ್ ಬೇಕೊ ತೋಚ್ಲಿಲ್ಲ. ರೂಂಒಳ್ಗೊಗಿ,  ಚಾಪೆಮೇಲೆ ಒಂದ್ ದುಬ್ಟಿ "ಗುಬುರ್ ಹಾಕ್ಕೊಂಡ್ " ಮಲ್ಗ್ ಬಿಟ್ಟೆ

No comments:

Post a Comment