’ನಮ್ಮ ಮನೆಯ ಹಿತ್ತಲಿನ ಏಳುಸುತ್ತಿನ-ಮಲ್ಲಿಗೆ ಹೂವಿನ ಕಥೆ’ !

ಹೊಳಲ್ಕೆರೆಯ  ನಮ್ಮ ಮನೆಯ ಹಿತ್ತಲಿನಲ್ಲಿನ ಗಿಡಗಳನ್ನು ನೆನೆಸಿಕೊಳ್ಳದೆ ವಿಧಿಯಿಲ್ಲ. ಆ ಹಿತ್ತಲಿನಲ್ಲಿ ಯಾವ ಗಿಡಗಳು ಬೆಳೆದಾವು, ಎಂದು ಹೇಳುತ್ತಿದ್ದ ದಿನಗಳು ಇದ್ದವು. ಆದರೆ, ಅದೇ ಹಿತ್ತಲಿನಲ್ಲಿ ನಾವು ರಾಶಿರಾಶಿ, ಪುಟ್ಟಿಗಟ್ಟಲೆ ಮಲ್ಲಿಗೆ ಹೂವು, ಅಂಜೂರ, ಹತ್ತಿ, ತಿಂಗಳ ಹುರುಳಿಕಾಯಿ, ದಬ್ಬಗಾಯಿ, ಹಾಗಲಕಾಯಿ, ಬದನೆಕಾಯಿ, ದಂಟಿನ ಸೊಪ್ಪು, ಮನ್ಯವರೇಕಾಯಿ, ತರಕಾರಿಗಳನ್ನು ಬೆಳೆಯುತ್ತಿದ್ದೆವು ಎಂದು ಹೇಳಿದರೆ, ಯಾರೂ ನಂಬುವುದಿಲ್ಲ.ನಮ್ಮ ಹಿತ್ತಲಿನಲ್ಲಿ,  ಅಮ್ಮ ಮುಸುರೆ ಪಾತ್ರೆಗಳನ್ನು  ಕುಳಿತುಕೊಂಡು ತೊಳೆಯಲು ಅನುಕೂಲವಾಗುವಂತಹ  ಒಂದು ಬಂಡೆಯನ್ನು ಹಾಕಿಸಿಕೊಂಡಿದ್ದಳು. ಬಟ್ಟೆ ಒಗೆಯಲು ಮತ್ತೊಂದು ದೊಡ್ಡ ಇಳಿಜಾರಾಗಿ ಹೊಂದಿಸಿದ್ದ ಬಂಡೆಯಿತ್ತು. ನಾವು ಬಳಸುತ್ತಿದ್ದದ್ದು ನಮ್ಮ ಮನೆಯ ಅಂಗಳದಲ್ಲಿದ್ದ ಭಾವಿಯ ಉಪ್ಪುನೀರನ್ನು. ಆದರೆ ಅಮ್ಮ ಮಲ್ಲಿಗೆ ಬಳ್ಳಿಗೆ ಮಾತ್ರ ಸಿಹಿ-ನೀರನ್ನು ಹೊಂಡದಿಂದ ತಂದು ಹಾಕುತ್ತಿದ್ದರು. ಹೊಂಡವೇನು ಕಡಿಮೆ ದೂರವಿತ್ತೆ. ಸುಮಾರು ಒಂದೂವರೆ ಮೈಲಿದೂರ ನಡೆದೇ ಹೋಗಬೇಕು. ಅಲ್ಲಿಂದ ಅರ್ಧ ಮೈಲಿ ನಡೆದರೆ, ಪೇಟೆ ಭಾವಿ. ಆಭಾವಿಯ ಸಕ್ಕರೆಯಂತ ನೀರನ್ನು  ಕುಡಿಯಲಿಚ್ಛಿಸುವವರು, ಅಲ್ಲಿಗೆ ಹೋಗಿ ಆಳವಾದ ಭಾವಿಯಲ್ಲಿ ಚಿಕ್ಕ ಚೊಂಬನ್ನು ಬಿಟ್ಟು ಅದರಲ್ಲಿ ಮಗೆದು ಮಗೆದು ಕೊಡಕ್ಕೆ ನೀರು ತುಂಬಿಸಬೇಕಾಗಿತ್ತು.

ಅಂತಹ  ಉಪ್ಪುಮಣ್ಣಿನಲ್ಲಿ ಎರಡು ಅಂಜೂರದ ಮರಗಳು ಹೇಗೆ ಬೆಳೆದು ಹಣ್ಣುಗಳನ್ನು ಕೊಡುತ್ತಿದ್ದವೋ ನಾನರಿಯೆ. ಜೊತೆಗೆ,  ಅಲ್ಲೆಲ್ಲೂ ದೊರೆಯದ ಒಂದು ವಿಶಿಷ್ಠವಾದ ಜಾತಿಯ ಏಳು ಸುತ್ತಿನ ಮಲ್ಲಿಗೆ ಬಳ್ಳಿ. ಹೊಳಲ್ಕೆರೆಯಲ್ಲಿ  ಯಾರಮನೆಯಲ್ಲೂ ಅಂಜೂರದ ಹಣ್ಣಿನ ಮರವನ್ನು ಕಾಣೆವು. ಮಿರಜ್ ನಿಂದ ರೈಲಿನಲ್ಲಿ, ಅಥವಾ ಬಸ್ಸಿನಲ್ಲಿ ಬರುವಾಗ, ರಸ್ತೆಯ ಬದಿಯ ಮನೆಯ ಕಾಂಪೌಂಡ್ ನೊಳಗೆ ಅಂಜೂರದ ಮರಗಳು ಕಾಣಿಸುತ್ತಿದ್ದವು. ಆದರೆ ಹಣ್ಣುಗಳನ್ನು ಕೈಬೆರಳಲ್ಲಿ ಎಣಿಸಬಹುದಿತ್ತು.

ಮಲ್ಲಿಗೆ ಹೂವಿನ ಬಳ್ಳಿಯನ್ನು ’ಕೊಂಡಮಾವಿನ ಸೊಪ್ಪಿನ ಮರ ’ಕ್ಕೆ ಹಬ್ಬಿಸಿದ್ದರು. ಯಾವಾಗಲೂ ಕೊಂಡಮಾವಿನಮರದ,  ಹಸಿರು ಹಳದಿ ಎಲೆಯ ಮಧ್ಯದಲ್ಲಿ, ಅದಕ್ಕೆ ಹೊಸೆದುಕೊಂಡು ಹಬ್ಬಿರುವ  ಮಲ್ಲಿಗೆಯ ಬಳ್ಳಿ, ಮತ್ತು ಅದರ  ಹೂವಿನ ಸೌರಭಕ್ಕೆ ಮರುಳಾಗದಿದ್ದವರೇ ಇಲ್ಲ. ರಸ್ತೆಯಲ್ಲಿ ಹೋಗಿ ಬರುವವರೆಲ್ಲಾ ಎಲ್ಲೋ ಮಲಿಗೆ ಹೂವಿನ ಪರಿಮಳ ಬರ್ತಿದೆಯಲ್ಲಾ, ಬನ್ನಿ ನೋಡುವ, ಎಂದು ನಮ್ಮ ಮನೆಗೆಯೊಳಕ್ಕೆ  ಬಂದು ವಿಚಾರಿಸುತ್ತಿದ್ದರು. ಅಮ್ಮನಿಗೆ ಮಲ್ಲಿಗೆ ಹೂವಿನ ಬಗ್ಗೆ ಹೇಳಲು ಅದೇನು ಉತ್ಸಾಹವೋ ! ಹೂವನ್ನು ಕೈಬೆರಳಲ್ಲಿ ಹಿಡಿದು ಒಂದೊಂದೇ ಸುತ್ತುಗಳನ್ನು ಎಣಿಸುತ್ತಾ ತೆಗೆದು ಅದರ ಹೆಚ್ಚುಗಾರಿಕೆಯ ಸೊಬಗನ್ನು ವಿವರಿಸಿ ಹೇಳುತ್ತಿದ್ದರು. ಏಳುಸುತ್ತೆಂದು ಹೇಳಿದರೂ ೨-೩ ಸುತ್ತು ಬರುವಹೊತ್ತಿಗೆ ದಳಗಳು ಅಂಟಿಕೊಂಡು ಹರಿದು ಹೋಗುತ್ತಿದ್ದವು. ’ಹೀಗೆ ಮಾಡಿ ತೆಗಿಬೊದು’, ಅಂತ ಹೇಳಿ ತಪ್ಪಿಸ್ಕೊಳ್ಳೋಳು.

ಒಂದು ದಿನ ಅಮ್ಮ ಕೋಪದಿಂದ ಕಿಡಿಕಿಡಿಯಾಗಿದ್ದರು. ಕೈನಲ್ಲಿ ಮೊಚ್ಚನ್ನು ಹಿಡಿದು, ಮಲ್ಲಿಗೆ ಬಳ್ಳಿಯನ್ನು ಅನೇಕ ತುಂಡುಗಳಾಗಿ ಕತ್ತರಿಸಿ ’ನಡಿ ಶನಿಮುಂಡೇದೆ’, ಎನ್ನುತ್ತಾ, ಕಡಿದುಹಾಕಿದ್ದು ನಮಗೆ ಅಚ್ಚರಿಯನ್ನುಂಟುಮಾಡಿತ್ತು. ಮನೆಯಲ್ಲಿ ಅಪ್ಪನಿಗೂ ಸ್ವಲ್ಪ ಹೊತ್ತು ಅದನ್ನು ಸಹಿಸಲಾರದೆ ನೆಲಕ್ಕೆ ಕುಸಿದು ಕುಳಿತಿದ್ದರು. ’ಆಗಿದ್ದೇನು’ ಎಂದು ಕೇಳಿದರೆ ಅಮ್ಮನಿಗೆ ಅದನ್ನು ವಿವರಿಸುವಾಗ ಬಾಯಿತೊದಲುತ್ತಿತ್ತು. ಮತ್ತು ಬೇಸರ, ಉದ್ವೇಗ, ಒಂದು ತರಹದ  ಅಸಮಾಧಾನಗಳೆಲ್ಲವನ್ನೂ ನಾವು ಅಮ್ಮನ ಮುಖದಲ್ಲಿ ಕಾಣಬಹುದಾಗಿತ್ತು.

ಅಮ್ಮನ  ಕೋಪ ಸ್ವಲ್ಪ  ಕಡಿಮೆಯಾದಾಗ, ಅವರೇ ಬಿಕ್ಕಳಿಸಿ ಅಳುತ್ತಾ ಹೇಳಿದರು. ’ಆಯ್ತು’, ’ನಮಗೂ ಮಲ್ಲಿಗೆ ಹೂವಿನ ಋಣ ಮುಗಿದಂತೆಯೇ’. ಅಂದಾಗ ನಮಗೆ ತಡೆಯಲಾಗಲಿಲ್ಲ. ’ಅಮ್ಮಾ ಅದೇನು ನೀನು ಮಾತಾಡ್ತಿರೋದು’, ’ಋಣ ಹೋಯ್ತು ಅಂತಿದೀಯ’, ’ಆದ್ರೆ ಅದನ್ನು ಮೊಚ್ಚಿನಿಂದ ಕಡಿದುಹಾಕಿದವಳು ನೀನೇ ಅಲ್ವಾ’, ’ಯಾಕೆ ಹೀಗೆ ಮಾಡಿದೆ’ ?

ನಿಧಾನವಾಗಿ ಉಮ್ಮಳಿಸಿ ಬರುತ್ತಿದ್ದ ಕಣ್ಣೀರನ್ನು ಬಿಗಿಹಿಡಿದು ಅಮ್ಮ  ಹೇಳಲು ಆರಂಭಿಸಿದಳು. ’ನೀವೆಲ್ಲ ಬೆಳಿಗ್ಯೆ ಮಲಗಿರೊವಾಗ ಆಗಿದ್ದಿದು’. ’ನಾನು ಪ್ರತಿದಿನ ಸ್ನಾನಮಾಡಿದ ತಕ್ಷಣ ಹಿತ್ತಿಲಿಗೆ ಬಂದು ಹೂವನ್ನು ಬಿಡಿಸುತ್ತಿದ್ದೆ’. ’ಆದರೆ ಹೋದವಾರದಿಂದ ಅದೇನು ಹೂವು ಬಿಡ್ತಪ್ಪ; ಈ ಗಿಡದಲ್ಲಿ’. ’ನನ್ನ ಜನ್ಮದಲ್ಲೇ ಕಂಡಿರಲಿಲ್ಲ’. ’ಮಾರನೆದಿನ ಹೂವೆಲ್ಲಾ ಯಾರೊ ಬಿಡ್ಸಿ ತೊಗೊಂಡ್ ಹೊರ್ಟ್ ಹೋಗಿದೃ’. ’ಅದಲ್ದೆ, ಗಿಡದ ಬದಿಯಲ್ಲೇ ಪಾಯಿಕಾನೆ ಮಾಡಿ ಅಸಹ್ಯಮಾಡಿಹೋಗಿದೃ’. ’ಮನೆಗೋಡೆ ಹಾರಿಬಂದು ಮಾಡಿದ ಈ ರಂಪನ ಸಹಿಸಕ್ಕಾಗಲಿಲ್ಲ’. ’ಅವತ್ತೊಂದೇ ದಿನ ಅಲ್ಲ. ಹೆಚ್ಚು ಕಡಿಮೆ ಪ್ರತಿದಿನ ಇದು ಮುಂದುವರಿತು. ಕತ್ತಲು-ಕತ್ತಲಾಗಿರುವಾಗ ನಾನೊಬ್ಳೆ ಇಲ್ಲಿಗೆ ಬಂದು ಕಳ್ಳರನ್ನು ಹಿಡಿದು ಎದುರುಹಾಕಿಕೊಳ್ಳೋದು ನನಗೆ ಸರಿಯೆನಿಸಲಿಲ್ಲ’. ’ಅದಕ್ಕೆ ಏನ್ ಮಾಡ್ಲಿ ಅಂತಾ ಭಾಳ ತಲೆಕೆಡಿಸ್ಕೊಂಡೆ. ಇವತ್ತು ಅದಕ್ಕೆಉತ್ತರ ಸಿಕ್ತು. ಗಿಡದ ಬಳಿ ಹೋಗಕ್ಕಾಗತ್ಯೇ ? ಮಲದ  ಅಸಹ್ಯ ವಾಸನೆ,  ಅದನ್ನು ತೊಳೆಯಲು ಇಲ್ಲದ ನೀರಿನಲ್ಲಿ ಕೊಡಗಟ್ಟಲೆ ನೀರು ಹಾಕಿ ಮಾಡೊರ್ ಯಾರಪ್ಪ. ನಿಮಗೆಲ್ಲಾ ತೊಂದ್ರೆ’. ’ಹೊಂಡದಿಂದ ನೀರು ಹೊತ್ತಿದ್ದು ಸಾರ್ಥಕವಾಯಿತು.’ ’ಹೋಗ್ಲಿ ಬಿಡು, ಯಾರಿಗೂ ಬೇಡ ಈ ದಿನಪ್ರತಿದಿನದ ಗೋಳು, ಬೇಸರ’ !

ಅಂಜೂರದ ಹಣ್ಣುಗಳೂ ಅಷ್ಟೆ. ಒಂದು ಸರಿ ಬೆಂಗಳೂರಿಗೆ ಹೋಗಿ ಬಂದಾಗ ಮರವೆಲ್ಲಾ ಬೋಳಾಗಿತ್ತು ಒಂದುಹಣ್ಣೂ ಇರಲಿಲ್ಲ. ನಾವೇ ನೀರು, ಗೊಬ್ಬರ ಎರೆದು ಆಸ್ತೆಯಿಂದ ಮಗುವಿನ ತರಹ ಬೆಳೆಸಿದ್ದ  ಆ ಮರಗಳನ್ನೂ ಕಡಿದು ಹಾಕಿ,  ಮನಸ್ಸಿಗೆ ನೆಮ್ಮದಿ ಮಾಡಿಕೊಂಡಿದ್ದಾಯಿತು.

Comments

Popular posts from this blog

ತಾಯಿಯಂತೆ ಮಗಳು ನೂಲಿನಂತೆ ಸೀರೆ !

ಮಧುರ ಕ್ಷಣ- ಸರಸ್ವತಿ ಸಮ್ಮಾನ್, ಪದ್ಮ ಭೂಷಣ ಪ್ರಶಸ್ತಿ ವಿಜೇತ, ಡಾ. ಎಸ್ ಎಲ್. ಭೈರಪ್ಪನವರ ಜತೆ ಸಂದರ್ಶನ !

Shri. Chitradurga Mahadev Bhatt, Bombay's one of the Great Yoga teachers during 1950s to 1980s !