Thursday, December 24, 2009

ನನ್ನ ಬಾಲ್ಯದ ದಿನಗಳ ವಿವರಗಳು, ನನ್ನಷ್ಟೆ ಅವ್ಯವಸ್ಥಿತ !ಚಿತ್ರದಲ್ಲಿ ಮುಂದಿನ ಸಾಲಿನಲ್ಲಿ ಕುಳಿತ ವ್ಯಕ್ತಿಗಳು : ಶ್ರೀ . ಎಚ್. ಆರ್. ರಾಮಕೃಷ್ಣರಾವ್, (ನನ್ನ ಅಣ್ಣ) ಶ್ರೀ. ಪ್ರೊ. ಜಿ. ಪಿ. ರಾಜರತ್ನಂ, ಮತ್ತು ಇನ್ನೊಬ್ಬರು. (ಅವರ ಹೆಸರು ತಿಳಿಯದು)
ಬೆಂಗಳೂರಿನ ಸೆಂಟ್ರೆಲ್ ಕಾಲೇಜ್ ನಲ್ಲಿ ಆಗ, ಅತ್ಯಂತ ಹೆಸರಾಗಿದ್ದ, ’ ಸೆಂಟ್ರೆಲ್ ಕಾಲೇಜ್ ಕರ್ನಾಟಕ ಸಂಘ,’ ದಲ್ಲಿ ಕಾರ್ಯದರ್ಶಿಯಾಗಿ ಆಯ್ಕೆಯಾದ ನಮ್ಮಣ್ಣ, ರಾಮಕೃಷ್ಣ, ಅಲ್ಲಿನ ಎಲ್ಲ ಪ್ರೊಫೆಸರ್ ಗಳ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದವ ! ಪ್ರೊ. ಜಿ. ಪಿ. ರಾಜರತ್ನಂ, ಪ್ರೊ. ವೀ. ಸಿ. ಅವನ ಪ್ರೀತಿಯ ಗುರುಗಳು ! ಅವರ ಪ್ರಭಾವ ಎಷ್ಟು ಮೈಗೂಡಿಸಿಕೊಂಡಿದ್ದ ಎಂದರೆ, ತಾನು ರಾಜರತ್ನಂ, ಮತ್ತು ವೀ. ಸಿಯವರ ಜಾಗಗಳಲ್ಲಿ ನಿಂತು ಏನಾದರೂ ಹೇಳುತ್ತಿದ್ದಂತೆ, ಅವನು ಭಾವಿಸುತ್ತಿದ್ದ. ಕಂಚಿನ ಕಂಠ ! ಮಾತಿನ ಏರಿಳಿತ, ಮತ್ತು ಗಾಂಭೀರ್ಯ ಮುಂತಾದವುಗಳು ಅವನ ಮೇಲೆ ಅಚ್ಚು ಹೊಯ್ದಂತೆ ನಮಗೆ ಕಾಣಿಸುತ್ತಿತ್ತು. ಇಂದಿಗೂ ಅವನು ಏನಾದರೂ ನಮ್ಮ ಮುಂದೆ ಹೇಳಲು ಕುಳಿತರೆ, ಅದೆಷ್ಠು ಮನಮೋಹಕವಾಗಿ ಹೇಳುತ್ತಾನೋ, ನಮಗಂತೂ ಅವನ ಮಾತು ಕೇಳಲು ಅತಿ ಕಾತುರ ! ಈಗ ಹೃದಯದ ಒಂದೆರಡು ಶಸ್ತ್ರ ಕ್ರಿಯೆಗಳು ಆಗಿದ್ದು, ಡಾ. ಮಾತನಾಡಲು ಬಿಡ್ದಿದೄ  ಹುಟ್ಟುಗುಣ .... ಕೇಳಬೇಕಲ್ಲ... ನಮ್ಮಮ್ಮ ಹೇಳ್ದಂಗೆ, ಅವನ್ ಬಂಡ್ವಾಳ ಎಲ್ಲಾ ಅವ್ನ ಮಾತ್ನೊಳ್ಗೆ ಅಲ್ವೆ ?  ಒನ್ನೊಂದ್ ಸರಿ, ಸರಿನ ಸುಳ್ಳು ಅನ್ಸೊಮಟ್ಟಿಗೆ ಹೇಳೋನು. ನಾವೇನಾದರು, ಸುಳ್ಳು ಅನ್ನೊ ವಿಷ್ಯನ ತಿಳಿಸಿದರೆ, ಇಲ್ಲ ಸರಿಯಾಗಿಯೇ ಇದೆ ಅನ್ನೋನು. ಮಾತ್ನಲ್ಲಿ ನಮ್ಮಣ್ಣ ಚಾಣಾಕ್ಷ. ಆಫೀಸ್ ನಲ್ಲೂ ಅದೆಷ್ತ್ ಸಮಸ್ಯೆಗಳ್ನ ಲೀಲಾಜಾಲವಾಗಿ ಸರಿಪಡಿಸ್ತಿದ್ದ. ಯಾವುದಾದರು ವಿಷ್ಯನ ಅವನ್ ನಮಗೆ ಹೇಳಿ ಸಮಜಾಯ್ಸಿದ್ ಮೇಲೇ ನಾವ್ ಒಪ್ಗೊತಿದ್ವಿ....
ಇವರು, ಮಲ್ಲಾಡಿಹಳ್ಳಿಯ ಶ್ರೀ. ಶ್ರೀ ಶ್ರೀ ರಾಘವೇಂದ್ರರಾಯರು. ಸ್ವಾಮಿಗಳು ಎಂದು ಕರೆಯಬೇಡಿ ಎನ್ನುತ್ತಿದ್ದರು. ಆದರೆ, ಅವರು ಒಬ್ಬ ಮಹಾತಪಸ್ವಿ. ಯೋಗಾಚಾರ್ಯ, ಆಯುರ್ವೇದಾಚಾರ್ಯ, ಅತ್ಯಂತ ಸೊಗಸಾದ ಬರಹಗಾರ, ಯಶಸ್ವಿ ಮುಂದಾಳತ್ವವನ್ನು ಹೊಂದಿದ್ದು, ಹಲವಾರು ಶಿಕ್ಷಣ ಸಂಸ್ಥೆಗಳನ್ನು ಆಸ್ಪತ್ರೆಗಳನ್ನು ಮತ್ತು ಯೋಗಶಾಲೆಯನ್ನು ನಿರ್ಮಿಸಿದ್ದಾರೆ. ಇವೆಲ್ಲಾ ಅವರೊಬ್ಬರೇ ಮಾಡಿದ್ದು. ತಮ್ಮನ್ನು ’ತಿರುಕ ’ನೆಂದು ಕರೆದುಕೊಂಡು, ತಮ್ಮ ಆಶ್ರಮಕ್ಕೆ, ’ ಮಲ್ಲಾಡಿಹಳ್ಳಿ ಅನಾಥಾಶ್ರಮ ’ವೆಂದು ಕರೆದುಕೊಂಡರು. ಅವರೊಬ್ಬ ದೈವಸಂಭೂತರು. ಪ್ರಾತಃಸ್ಮರಣೀಯರು, ಮಹಾಯೋಗಿಗಳು !

ಇವರು ನಮ್ಮ ಭಾವ, ನನಗೆ ಮಾವ, ತಿಮ್ಮಪ್ಪಯ್ಯನವರು. ನಾನು ಅವರನ್ನು ಹತ್ತಿರದಿಂದ ನೋಡಿದಮೇಲೆ ಅವರ ಬಗ್ಗೆ ಗೌರವ ಆದರಗಳು ಇನ್ನೂ ಹೆಚ್ಚಾದವು. ಹಳ್ಳಿಯಿಂದ ಬಂದವರು. ನಾವಿದ್ದಿದ್ದಕ್ಕಿಂತ ಮತ್ತೂ ತೀರ ಕಗ್ಗ ಹಳ್ಳಿಯ ಬಳಿಯ ಚಿಕ್ಕ ಗ್ರಾಮದ ಶ್ಯಾನುಭೋಗಿಕೆ ವೃತ್ತಿ. ಪಿತ್ರಾರ್ಜಿತ ಜಮೀನು,  ತೋಟ,  ಅವರ ಪಾಲಿಗೆ ಬಂದಿತ್ತು. ಎಂದೂ ಮನೆಯಲ್ಲಿ ದನಿ ಏರಿಸಿ ಪರಿವಾರದವರನ್ನು ಬೈದವರಲ್ಲ. ಶ್ಯಾನುಭೋಗರಾಗಿದ್ದಾಗಿನ ಮಾತು ಬೇರೆ. ದರ್ಪ, ಮತ್ತೆ ಜೋರಾಗಿ ಮಾತಾಡಲು ಬರದವರು ಆ ವೃತ್ತಿಗೆ ಲಾಯಕ್ ಅಲ್ಲ, ಎನ್ನುವ ಭಾವನೆ ಇದ್ದ ಕಾಲ. ನಮ್ಮಪ್ಪ ಹಾಗಾಗಿ, ನಮ್ಮನ ಕಣ್ಣಿನಲ್ಲಿ ಬೆಲೆ ಕಡಿಮೆಯಾದವರು. ಬುದ್ಧಿವಂತರು. ಯಾರನ್ನೂ ನೋಯಿಸದವರು. ಹೆಚ್ಚು ಭಾಷೆಗಳನ್ನು ತಿಳಿದವರು, ಹೆಚ್ಚು ಊರು ಸುತ್ತಿದವರು, ಮತ್ತು ಆಗಿನ ಕಾಲದಲ್ಲಿ ಬ್ರಿಟಿಷ್ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸಮಾಡಿದವರು. ಇತ್ಯಾದಿ ಇತ್ಯಾದಿಗಳು ಅವರ ಹಣೆಪಟ್ಟಿಗೆ ಸೇರಿಕೊಂಡಿದ್ದವು. ಊರಿನವರೆಲ್ಲಾ ಬೊಂಬಾಯಿನಲ್ಲಿ ಇದ್ದು ಕೆಲಸ ಮಾಡಿದವರೆಂದು ಅತಿ ಹೆಚ್ಚಿನ ಗೌರವ ಕೊಡುತ್ತಿದ್ದರು. ಅಲ್ಲದೆ ಎಲ್ಲರಿಗೂ ಗೊತ್ತಿದ್ದಂತೆ ಅಪ್ಪನ ಬರವಣಿಗೆ ಪ್ರಿಂಟ್ ತರಹ ಅನ್ನೋದನ್ನ ಯಾರು ಕಡೆಗಣಿಸಲು ಸಾಧ್ಯ. ಇನ್ನು ಅಕೌಂಟ್ ವಿಶಯದಲ್ಲಿ ಎರಡು ಮಾತಿಲ್ಲ. ಅದಕ್ಕೆ ಅವರ್ನ ನಮ್ಮೂರಿನ ’ಕೋ ಆಪರೇಟಿವ್ ಸೊಸೈಟಿಗೆ, ” ಆಡಿಟರ್ ಮಾಡಿದೃ.

ಆ ನಾನು ಹೇಳಕ್ ಹೊರ್ಟಿರೋದು ನಮ್ಮ ಭಾವನವರ ಬಗ್ಗೆ ಅನ್ನೋದೆ ಮರ್ತ್ ಬಿಟ್ಟೆ. ಆಗಿನ ಕಾಲದಲ್ಲಿ ಅಷ್ಟೊಂದ್ ಜನ ಮಕ್ಕಳಿಗೆ ಮದುವೆ ಮುಂಜಿ ಮಾಡಿ ಇನ್ನೂ ತೋಟ ತುಡಿಗೆ ಉಳಿಸ್ಕೊಂಡ್ ಬಂದ ಹೆಗ್ಗಳಿಕೆನ ಎಲೄ ಹೇಳಿದ್ದೆ ಹೇಳಿದ್ದು. ನನ್ನ ದೃಷ್ಟಿಯಲ್ಲಿ ಅವರ ಮತ್ತೊಂದ್ ವಿಚಾರಮಾತ್ರ ದಾಖಲಿಸಲು ಯೋಗ್ಯವಾಗಿದೆ. ಅದೇನಪಾ ಅಂದ್ರೆ, ಚಿತ್ರದುರ್ಗದ ಆಕಾಶವಾಣಿ ಶಾಖೆಗೆ,  ಅವರು ಕೊಟ್ಟ ಸುಮಾರು ಒಂದು ಗಂಟೆ ಕಾರ್ಯಕ್ರಮ. ಇದನ್ನು ಕೇಳಿದವರಿಗೆ ಮಾತ್ರ ಅದರ ಹೆಗ್ಗಳಿಕೆಯ ಪರಿಚಯವಾಗುತ್ತದೆ. ಸ್ವಾತಂತ್ರ್ಯಪೂರ್ವದ/ಸ್ವಾತಂತ್ರ್ಯೋತ್ತರದ ಸಮಯದಲ್ಲಿ ಒಂದು ಕಸಬಾ/ಹೋಬಳಿಯ  ಶ್ಯಾನುಭೋಗರ ಕಾರ್ಯವ್ಯಾಪ್ತಿಯ ಬಗ್ಗೆ ಮಾಹಿತಿಗಳು ಬೇಕಾದವರು, ಈ ’ಸಂವಾದ ’ವನ್ನು ಖಂಡಿತ ಆಲಿಸಬೇಕು. ಅವುಗಳು ಅಷ್ಟು ಮಾಹಿತಿಪೂರ್ಣವಾಗಿವೆ, ಮತ್ತು ದಾಖಲಿಸಲು ನಮಗೆ ಪ್ರೇರಣೆಕೊಡುತ್ತವೆ....
ನಮ್ಮಮ್ಮ. ನಾವು ನಾಲ್ಕುಜನ ಮಕ್ಕಳ ಪ್ರೀತಿಯ ಅಮ್ಮ, ರಾಧಮ್ಮ, ಉರ್ಫ್ ಸುಬ್ಬಮ್ಮ. ಮದುವೆಗೆ ಮೊದಲು ಅವರನ್ನು ಎಲ್ಲರೂ ಸುಬ್ಬಿ, ಸುಬ್ಬಮ್ಮ ಅಂತಿರಬಹುದು. ನಮ್ಮ ಪ್ಪ ರಂಗರಾಯರಾದರೆ, ಅವರ ಪತ್ನಿ, ರಾಧೆಯಾಗುವುದು ಸ್ವಾಭಾವಿಕವಲ್ಲವೇ !
ಟೆಲಿವಿಷನ್ ನಲ್ಲಿ ಹಾಡ್ ಬರ್ತಿದೆಯಲ್ಲ. ಕೇಳಿಸ್ಕೊಂಡ್ರಾ ? " ಓ ಮಾ, ಕಿತನಿ ಅಚ್ಛೀಹೈ, ಪ್ಯಾರೀ ಹೈ ಓ ಮಾ, ಮೇರಿ ಪ್ಯಾರಿ ಮಾ."... ಅವಳ ಪ್ರೀತಿಗೆ ಹೋಲಿಸುವ ಯಾವ ಪದವನ್ನೂ ನಾವು ಇಂದಿನವರೆಗೆ ಕಂಡಿಲ್ಲ ; ಕೇಳಿಲ್ಲ, ಮುಂದೆಯೂ ಕೇಳೊಲ್ಲ ! ತಾಯಿ, ಎಲ್ಲರಿಗೂ ಅಕ್ಕರೆಯ ವಸ್ತು, ನಿಜ. ಆದರೆ ನಮ್ಮಮ್ಮ ಮಾತ್ರ ಒಬ್ಬ ಅಮಾನುಶ ವ್ಯಕ್ತಿ, ಅವಳ ಪ್ರೀತಿ ಕಡಲಿನಷ್ಟು, ಆಳ-ವಿಸ್ತಾರ, ಆಗಸದಷ್ಟು ವಿಶಾಲ, ಮತ್ತು ಹಿಮಾಲಯದಷ್ಟು ಎತ್ತರ. ಹಿಮಾಲಯಕ್ಕಿಂತ ಬೇರೆ ಹೋಲಿಕೆ ಕೊಡಲಾದೀತೆ ?
ಇವರು, ನಮ್ಮ ಚಿಕ್ಕಮ್ಮ, ಪದ್ದಮ್ಮ, ಉರ್ಫ್, ’ಪದ್ಮಾವತಮ್ಮ” ಜೀವನದಲ್ಲಿ ಅತಿಯಾಗಿ ವೇದನೆಯನ್ನು ಅನುಭವಿಸಿದ ಜೀವ. ನಮ್ಮ ಚಿಕ್ಕಪ್ಪ ಸ್ವಲ್ಪ ಅಸ್ವಸ್ಥರಾದ ಮೇಲೆ, ಅವರ ಮೇಲೆ ಮನೆಯ ಎಲ್ಲಾ ಜವಾಬ್ಡಾರಿಗಳು ಬಿದ್ದವು. ಅವನ್ನೆಲ್ಲಾ ನಗುಮುಖದಿಂದ ಸಮರ್ಥವಾಗಿ ನಿಭಾಯಿಸುತ್ತಾ, ಮೊಮ್ಮಕ್ಕಳ ವಿದ್ಯಾಭ್ಯಾಸಕ್ಕೂ ಸಹಕರಿಸಿ, ಮನೆಯನ್ನು ಉಳಿಸಿದ ಮತ್ತೊಬ್ಬ ದಿವ್ಯತಾಯಿ...
ಇವರು, ನಮ್ಮ ಪ್ರೀತಿಯ ಸಂಜೀವಣ್ಣ. ನಮ್ಮ ಮನೆಯಲ್ಲಿ ಎಂದಾದರೂ ಒಬ್ಬ ಪ್ರವರ್ಥಮಾನಕ್ಕೆ ಬಂದ ವ್ಯಕ್ತಿಯ ವಿಚಾರ ಕೇಳಿಬಂದರೆ, ಅವರಲ್ಲಿ ಎಲ್ಲರಿಗಿಂತ ಎತ್ತರದಲ್ಲಿ ಎದ್ದು ಕಾಣಿಸುವವರು, ನಮ್ಮಮ್ಮನಿಗೆ ತಿಳಿದವರು, ಆಪ್ತರು, ಮಗುವಿನಂತಹ ಸ್ವಭಾವದರು-ನಮ್ಮ ಸಂಜೀವಣ್ಣ. ಮಗಳು, ಶೋಭಿ, ಅವರನ್ನು ದಾದಾ ಎನ್ನುತ್ತಾಳೆ. ಅಕ್ಕಪಕ್ಕದ ಪಡೋಸಿನವರೂ ಸಹಿತ. ಯಶೋದಮ್ಮ ಅವರಿಗೆ ತಕ್ಕಹಾಗೆ ಎಲ್ಲದರಲ್ಲೂ ಮುಂದು. ಅಡುಗೆ ಕೆಲಸದಲ್ಲಿ ಅದರಲ್ಲಿ ಏನಾದರೂ ಹೊಸರುಚಿಯನ್ನು ಗುರುತಿಸಿದರೆ, ಅದು ನಮ್ಮತ್ತಿಗೆ ಕೈಚಳಕವೆಂದು ಧಾರಾಳವಾಗಿ ಹೇಳಿಬಿಡಬಹುದು.
ಇದು ತೀರ ಇತ್ತೀಚಿನ ಚಿತ್ರ ಅಂದ್ರೆ, ಮೊನ್ನೆ ತಾನೇ ತೆಗೆದದ್ದು. (೨೮-೦೩-೨೦೧೦) ನಾನು, ಸರೋಜ, ಶೋಭ ಮನೆಗೆ ಹೋಗಿದ್ವಿ. ಮನೆಯಲ್ಲಿ ಅವಳು, ಅಮೃತ್, ನಮಿತ್, ದಾದ, ಮತ್ತೆ ಅಮೃತ್ ತಮ್ಮನ ಮಗಳು, ಅಂಕಿತ, ಮತ್ತೆ ಮುಖ್ಯವಾಗಿ, ಶೋಭಾನ ಸೊಸೆ, ಇದೃ.

ತಿಂಡಿ ತಿಂದಮೇಲೆ ಈ ಚಿತ್ರ ನಾನು ಕ್ಲಿಕ್ಕಿಸಿದೆ. ಅಬ್ಬ. ಇದನ್ ಅಪ್ಲೋಡ್ ಮಾಡಕ್ಕೆ ೨೦ ನಿಮಿಷ ಬೇಕಾಯ್ತು. ದೊಡ್ಡ ಫೈಲು. ಇಲ್ಲಿ ನಾನು ಹೇಳಬಯಸುವ ನೆನೆಪಿಗಿ ಬಂದಷ್ಟು ವಿಷಯಗಳು ತೀರ ಹಳೆಯ ಸರಕಾಗಿರುವ ಸಾಧ್ಯತೆಗಳೇ ಹೆಚ್ಚು. ಮತ್ತೆ ನಮ್ಮ ಬಾಲ್ಯದ ದಿನಗಳ ವಿಷಯಗಳು್ ; ಹಾಗೆಯೇ ಇವತ್ತಿನ ಜೀವನದ ಒಂದು ನೋಟವನ್ನು ಬಯಲಿಗೆ ತರುವ ಪ್ರಯಾಸ. ಅಲ್ಪ ಸ್ವಲ್ಪ, ಬರೆಯೊದನ್ನು ಬಲಪಡಿಸ್ಕೊತಿದೀನಿ. ಮಕ್ಕಳು ಒಂದು ಒಳ್ಳೆ ಕ್ಯಾಮರ ಕೊಟ್ಟಿದಾರೆ, ನನಗಗೇನೆ ! ಇನ್ನೊಂದು ವಿಚಾರ ಅಂದ್ರೆ, ಇಂಟರ್ನೆಟ್ ಗೆ ನನ್ನ ಜೊತೆಗೆ ಸ್ಪರ್ಧಿಸೋರು ಯಾರೂ ಇಲ್ಲ. ’ಅರಸನ ಅಂಕೆಯಿಲ್ಲ. ದೆವ್ವದ ಕಾಟವಿಲ್ಲ ಅಂತಾರಲ್ಲ ’ ; (ಈ ಗಾದೆನ ನಮ್ಮಣ್ಣ ರಾಮಕೃಷ್ಣ, ಆಗಾಗ ಹೇಳ್ತಾಇರ್ತಾನೆ. ಯಾರ್ ಓದ್ಲಿ ಬಿಡ್ಲಿ, ಅದೂ ಇದು ಬರ್ದಿದ್ದೇ ಬರ್ದಿದ್ದು. 

ನಮ್ಮ ಅಣ್ಣ ತಮ್ಮಂದಿರ ಪೈಕಿ, ಚಂದ್ರಣ್ಣನ ಬಳಿಕ, ಪದವಿಗಳಿಸಿದ ನಮ್ಮಣ್ಣ, ರಾಮಕೃಷ್ಣ.....
ರಾಮಕೃಷ್ಣನ ತರುವಾಯ ನಮ್ಮನೇಲಿ ಮತ್ತೊಬ್ಬ ಪದವೀಧರೆಯೆಂದರೆ, ’ನಮ್ಮ ಸುಚರಿತ”. ಅವಳನ್ನು ನಾವೆಲ್ಲಾ ಪ್ರೀತಿಯಿಂದ   ಕರೆಯೋದು ’ಸುಚಿ”ಎಂದು. ಅವಳು ಅವರ ಅಜ್ಜಿಯ ಪಡಿಯಚ್ಚು. ಅಮ್ಮ ಅವಳನ್ನು ಬಹಳವಾಗಿ ಹಚ್ಚಿಕೊಂಡಿದ್ದರು. ಮನೆಯ ಉಸ್ತುವಾರಿ, ಎಲ್ಲರ ಯೋಗಕ್ಷೇಮದ ಕಾಳಜಿವಹಿಸುವ ಅವಳು ಸ್ವಲ್ಪ ಮಾತಿನಲ್ಲಿ ದಿಟ್ಟೆ ; ನೇರಯೆಂದು ಅನಿಸಿದರೆ ಆಶ್ಚರ್ಯವಿಲ್ಲ. ಅವಳಿರುವುದೇ ಹಾಗೆ ; ಮನಸ್ಸು ಮಾತ್ರ ಬೆಣ್ಣೆಯಷ್ಟು ಮೃದು.

ನಮ್ಮಪ್ಪ :
ಅವರ ಬಗ್ಗೆ ಬರೆಯಲು ಸಾಕಷ್ಟು ತಿಳುವಳಿಕೆ ನನಗೆ ಇರಲಿಲ್ಲ. ಆಗಿನ ಸನ್ನಿವೇಶಗಳನ್ನು ನೆನಪಿಸಿಕೊಳ್ಳುತ್ತಾ ಕೆಲವೊಂದು ನಿರ್ಣಯಗಳನ್ನು ನಾವು ಈಗ ಗಳಿಸಬಹುದೇನೋ ! ಒಟ್ಟಿನಲ್ಲಿ ಅವರ  ಪಾಡಿಗೆ ಯಾರನ್ನೂ ನೋಯಿಸದೆ ಬದುಕುವ ಸಾಧ್ಯತೆಗಳು ಎಲ್ಲಾ ಸಂಧರ್ಬಗಳಲ್ಲೂ ಇವೆಯೆನ್ನುವುದನ್ನು ಅವರು ಪ್ರತಿಪಾದಿಸಿದ್ದಾರೆ. ಸರಳವ್ಯಕ್ತಿ. ಬ್ರಿಟಿಷರ ಜೊತೆಗೆ ಕೆಲಸಮಾಡಿ ಹಲವಾರು ಅವರ ಕಾರ್ಯವಿಧಾನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಭಾರತೀಯತೆ ಅವರ ನರನಾಡಿಗಳಲ್ಲಿ ತುಂಬಿಹರಿದರೂ ಕೆಲವೊಂದು ಹೊಸ ವಿಚಾರಗಳಿಗೆ ಅವರ ಮನಸ್ಸು ಹೃದಯ ತೆರೆದಿದ್ದವು. ತಮ್ಮ ವೃತ್ತಿಜೀವನದಲ್ಲಿ ಅವರು ಎಂದೂ ಕೆಲಸಕ್ಕೆ ತಪ್ಪಿಸಿಕೊಂಡವರಲ್ಲ ; ತಡವಾಗಿ ಹೋದವರಲ್ಲ. ಪರಿಪೂರ್ಣವಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದರು. ದಿನಚರಿ ಬರೆಯುವ ಪರಿಪಾಠವಿತ್ತು. ಇಂದಿಗೂ ನಾವು ಅವರ ಡೈರಿಯ ಪುಟಗಳನ್ನು ಓದಿದಾಗ, ಆ ಸ್ಫುಟವಾದ ಸುಂದರ ಅಕ್ಷರಗಳಸಾಲುಗಳಲ್ಲಿ ನಾವು ಆದಿನಗಳ ಜೀವನದ ಎಳೆಗಳನ್ನು ಕಾಣಬಹುದು, ಗುರುತಿಸಬಹುದು. ಎಲ್ಲದರಲ್ಲೂ ಅಚ್ಚುಕಟ್ಟು. ರಾತ್ರಿಯ ಕತ್ತಲಿನಲ್ಲೂ ಬೆಳಕಿನ ನೆರವಿಲ್ಲದೆ ಅವರ ಕೊಠಡಿಯ ವಸ್ತುಗಳನ್ನು ಬೀಳಿಸದೆ, ತಡವರಿಸದೆ ಪಡೆಯುವಷ್ಟು ನಿಖರವಾಗಿಟ್ಟಿದ್ದ ವಸ್ತುಗಳು. ಕತ್ತರಿ, ಬ್ಲೇಡ್, ಪೆನ್, ರಬ್ಬರ್, ಬರೆಯುವ ಕಾಗದ, ಸೀಮೆಸುಣ್ಣ, ಪೆನ್ನಿನ/ ಲೇಖನಿಯ ನಿಬ್, ಕನ್ನಡಕ, ಇತ್ಯಾದಿ, ಇತ್ಯಾದಿಗಳು ಆಯಾಯ ಜಾಗಗಳಲ್ಲಿ ಮಟ್ಟಸವಾಗಿ ಇಡಲ್ಪಟ್ಟಿರುತ್ತಿದ್ದವು. ಅಪ್ಪನ ರೂಮ್ ಬಗ್ಗೆ ಮಾತಾಡುವಾಗ, ಅವರ ಪ್ರೀತಿಯ, ’ಪಾರ್ಕರ್ ಪೆನ್ನುಗಳು” ; ಒಂದು ಇಂಕ್ ಪೆನ್ನು. ಮತ್ತೊಂದು ಸೀಸದ ಕಡ್ಡಿ, ಅವರ ಪಾಕೆಟ್ ವಾಚ್, ಝೆನಿತ್ ಮಾಡೆಲ್, ಅದನ್ನ ಕೋಟಿನ ಮೇಲಿನ ಜೇಬಿನಲ್ಲಿ ಇಡೋರು. ಒಂದು ಬೆಳ್ಳಿ ಚೈನ್ ಮೇಲೆ ಒಂದು ಕಡ್ಡಿ, ಮತ್ತು ಅದಕ್ಕೆ ’ಗೋಂದಾವಲಿ ಮಹಾರಾಜರ ಚಿತ್ರದ ಲಾಕೆಟ್”ಇರೋದು. ಯಾವಾಗ್ಲೂ ಸಾಕಾದಷ್ಟು ಕ್ವಿಂಕ್ ಶಾಹಿ ಬಾಟಲ್, ಒಂದು ಇಂಕ್ ಪ್ಯಾಡು, ಟೋಪಿನ ಕ್ಲೀನ್ ಮಾಡಕ್ಕೆ ಒಂದು ಬ್ರಶ್, ಇತ್ಯಾದಿ, ಇತ್ಯಾದಿಗಳು.
ಅಪ್ಪನ ರೂಂ :
ಸಂಸಾರದಲ್ಲಿದ್ದರೂ ಅಂಟಿಯೂ ಅಂಟದಂತಿರಬೇಕು ಎನ್ನುವ ಮಾತನ್ನು ಅವರು ಪೋಶಿಸುವಂತಿತ್ತು, ಅವರ ಜೀವನ ಶೈಲಿ ! ’ಅನುಭವಾಮೃತ’ ವನ್ನು ಪ್ರತಿದಿನವೂ ಸಾಯಂಕಾಲ ಹಾಡುತ್ತಾ ಓದುತ್ತಿದ್ದರು. ದಾಸ್ಬೋಧ್, ಭಾಗವತ, ಭಕ್ತಿವಿಜಯ,  ಪಾಂಡವ ಪ್ರತಾಪವೆಂಬ ಮರಾಠಿ ಉದ್ಗ್ರಂಥವನ್ನು ವಾರದ ಕೆಲವು ನಿಗದಿಯಾದ ದಿನಗಳಲ್ಲಿ, ನಮ್ಮ ಮನೆಯ ಅಂಗಳದಲ್ಲಿ ಕುಳಿತು ಪಠಣಮಾಡಿ ಅದರ ಪ್ರತಿಪದಾರ್ಥಗಳನ್ನು ಕನ್ನಡದಲ್ಲಿ ಹೇಳುತ್ತಿದ್ದರು. ಅದನ್ನು ಅಲಿಸಲು, ಗುಡಿಗೋಪಾಲಣ್ಣ, ಗೋಪಾಲರಾಯರು, ಅವರ ಪರಿವಾರ, ಗಂಗಮ್ಮನವರು, ಪುಟ್ಟಲಕ್ಷಮ್ಮ ಮೇಡಮ್, ನಮ್ಮ ಪದ್ದ ಚಿಕ್ಕಮ್ಮ, ಅಂಗಳದ ಹುಡುಗರು, ನಾವುಗಳು. ಆಗಾಗ ಮೇಡಮ್ಮನವರು ಚಿಕ್ಕ ದನಿಯಲ್ಲಿ ಕೆಲವು ಸಂದೇಹಗಳನ್ನು ಕೇಳಿ ಅವಕ್ಕೆ ಸಮಂಜಸವಾದ ಉತ್ತರಗಳನ್ನು ಪಡೆಯುತ್ತಿದ್ದರು.
ನಮಗೆ ಅವರು ಒಂದೊಂದೇ ಹಾಳೆಗಳನ್ನು ಎತ್ತಿ ಓದಿ ಪಕ್ಕದಲ್ಲಿ ಪೇರಿಸಿಡುತ್ತಿದ್ದ ವೈಖರಿ ಆಶ್ಚರ್ಯವನ್ನುಂಟುಮಾಡುತ್ತಿತ್ತು. ಬಿಡಿಹಾಳೆಗಳು ಇಲ್ಲೇಕಿವೆ ? ಅವನ್ನು ಬೈಂಡ್ ಮಾಡಿಲ್ಲವೇಕೆ ? ಹಾಳೆಗಳಲ್ಲಿನ ಚಿತ್ರಗಳು ನಾವು ನೋಡಿದ್ದ ಚಿತ್ರಗಳಿಗಿಂತಾ ಭಿನ್ನವಾಗಿದ್ದವು. ಪಠಣವಾದ ಬಳಿಕ ಒಂದು ಮಲ್ಲಿಗೆ ಹೂವನ್ನು ಪುಸ್ತಕದಮೇಲಿರಿಸಿ, ಅದರಮೇಲೆ ದಪ್ಪ ರಟ್ಟಿನಹಾಳೆ ಇಟ್ಟು ಬಣ್ಣದ ದಾರದಿಂದ ಕಟ್ಟಿಡೋರು..
ಜ್ಯೋತಿಷ್ಯಶಾಸ್ತ್ರದಲ್ಲಿ ವಿಶೇಷ ಜ್ಞಾನ ಸಂಪಾದ್ನೆ ಮಾಡಿದೃ. ಅವರ್ ಸ್ನೇಹಿತರೊಬೃ, ಸೂರ್ಯನಾರಾಯಣ ಶಾಸ್ತ್ರಿಗಳೂ ಅಂತ ಬೆಂಗ್ಳೂರ್ನಲ್ಲಿದೃ. ಅವರು ಆಗಿನ ಕಾಲದಲ್ಲಿ ಬಿ. ಎ. ಪರೀಕ್ಷೆ ಪಾಸ್ ಮಡಿದ್ರು ಅಂತ ಹೆಸರುವಾಸಿಯಾಗಿದೃ. ಅವೃ ಹುಟ್ದಬ್ಬ ಮಾಡ್ಕೊಳ್ಳೋರು ಪ್ರತಿವರ್ಷ. ಆಗ ನಮ್ಮಪ್ಪ ಬೊಂಬಾಯ್ನಿಂದ ಬೆಂಗ್ಲೂರ್ಘೋಗೊರು. ಅವೃ ನಮ್ಮಪ್ಪಂಗೆ ಬಹಳ ಮರ್ಯಾದೆ ಗೌರವ ಕೊಡೋರಂತೆ. ಜ್ಯೋತಿಷ್ಯಶಾಸ್ತ್ರದ ಬಗ್ಗೆ ಗಂಟೆಗಟ್ಟಲೆ ಮಾತು ಕತೆ ಆಡ್ತಿದ್ರಂತೆ. ಅಮ್ಮ ಹೇಳ್ತಿದ್ಲು, ಅವ್ರೆಲ್ಲ ಸೇರ್ಕೊಂಡು ಒಂದ್ ಮ್ಯಾಗಝೈನ್ ಓಪನ್ ಮಾಡಿದ್ರಂತೆ. ಅದೇ ’ಆಸ್ಟ್ರೊಲಾಜಿಕಲ್ ಮ್ಯಾಗಝೈನ್”ಅಂತ ನನಗ್ ಗೊತ್ತಾಗಿದ್ದು. ನಾನ್ ಬೊಂಬಾಯ್ ನಲ್ಲಿದ್ದಾಗ ಮ್ಯಾಗಝೈನ್ ಎಡಿಟರ್ ರಾಮನ್ ರಿಗೆ, ಪತ್ರಬರೆದು, ನಮ್ಮಪ್ಪನ ಫೋಟೊ ಏನಾದೃ ಇದ್ರೆ, ದಯಮಾಡಿ ತಿಳ್ಸಿ ಅಂತವಿಚಾರ್ಸಿದ್ದೆ. ಅದಕ್ಕೆ ಒಂದ್ ಪತ್ರ ಬರ್ದಿದೃ ಅವೃ.”ಹೌದು. ನಾನು ಆಗಿನ್ನೂ ಚಿಕ್ಕೊನು. ನಮ್ಮ ತಾತನ ಹುಟ್ಟಿದ ಹಬ್ಬಕ್ಕೆ ದಾವಣಗೆರೆನೋ ಬೊಂಬಾಯೊ ಗೊತ್ತಿಲ್ಲ. ಒಬೃ ರಂಗರಾಯರು ಅನ್ನೋರು ಬರೋರು. ಅವೄ ನಮ್ಮ ತಾತ ತುಂಬಾ ವಿಚಾರ ವಿನಿಮಯ ಮಾಡ್ಕೊತಿದ್ದದ್ದನ್ನು ಚಿಕ್ಕೋನಾದ ನಾನು ನೋಡಿದ ನೆನಪು’. ”ನೀವು ಆ ರಂಗರಾಯರ ಮಗ ಎಂದು ಗೊತ್ತಾಗಿ ಸಂತೋಷವಾಗಿದೆ.’ ಬೆಂಗಳೂರಿನ ಕಡೆಗೆ ಬಂದಾಗ ಖಂಡಿತ ಬಿಡುವುಮಾಡಿಕೊಂಡು ನಮ್ಮ ಮನೆಗೆ ಬನ್ನಿ. ನಿಮ್ಮ ಅಣ್ಣ-ತಮ್ಮಂದಿರು, ಹಾಗೂ ಮಕ್ಕಳೆಲ್ಲಾ ಚೆನ್ನಾಗಿರುವ ಬಗ್ಗೆ ಬರೆದಿದ್ದೀರಿ. ಅವರಿಗೆಲ್ಲಾ ನನ್ನ ಮತ್ತು ನನ್ನ ಹೆಂಡತಿಯ ಶುಭಕಾಮನೆಗಳು’-ಬಿ. ವಿ. ರಾಮನ್
ಈ ಪತ್ರ ನನ್ನಬಳಿ ಬಹಳದಿನ ಇತ್ತು. ಮನೆಗೆ ಸುಣ್ಣ-ಬಣ್ಣ ಬಳಿಯುವ ಸಮಯದಲ್ಲಿ ಪುಸ್ತಕ, ಮತ್ತು ಕೆಲವು ಕಾಗದ ಪತ್ರಗಳು ಅಲ್ಲಿ ಇಲ್ಲಿ ಬಿದ್ದು ನಾಶವಾದವು. ಅವುಗಳಲ್ಲಿ ಇದೂ ಒಂದು ಎಂದು ನನಗೆ ನಂತರ ಅನ್ನಿಸಿತು !No comments:

Post a Comment